

ಬೆಂಗಳೂರು: ರಾಜ್ಯದಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮೈಸೂರು ಹೊರತುಪಡಿಸಿ ರಾಜ್ಯಾದ್ಯಂತ ಇಂದಿನಿಂದ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಗೊಂಡಿದ್ದು, ನಾಳೆಯಿಂದ (ಜೂ.22) ಅಂತಾರಾಜ್ಯ ಬಸ್ ಸಂಚಾರ ಶುರುವಾಗಲಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ಮಹತ್ವದ ನಿರ್ಧಾರ ಹೊರಡಿಸಿದ್ದು, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಕೋವಿಡ್ ಮಾರ್ಗಸೂಚಿ ನಿಯಮದೊಂದಿಗೆ ಜೂ.22ರಂದು ಬಸ್ ಸೇವೆ ಆರಂಭಗೊಳ್ಳಲಿದೆ. ಪ್ರತಿ ಬಸ್ಸಿನಲ್ಲಿ ಶೇ.50 ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಾತ್ರ ಬಸ್ ಸಂಚರಿಸಲಿದೆ. ಬಸ್ನಲ್ಲಿ ಪ್ರಯಾಣ ಮಾಡುವವರು ಕೋವಿಡ್ ನಿಯಮ ಪಾಲನೆ ಮಾಡುವುದು ಕಡ್ಡಾಯ.
ಇತ್ತ ರಾಜಧಾನಿ ಬೆಂಗಳೂರಿಗೆ ಬರುತ್ತಿರುವವರ ಸಂಖ್ಯೆ ಹೆಚ್ಚಿದೆ. ಕೂಲಿ ಕಾರ್ಮಿಕರು, ನೌಕರರು, ಕೆಲಸಗಾರರು ಗಂಟುಮೂಟೆ ಸಮೇತ ಸಿಲಿಕಾನ್ ಸಿಟಿಗೆ ಆಗಮಿಸುತ್ತಿದ್ದಾರೆ.