

ಉಡುಪಿ: ಜನತಾ ಕರ್ಫ್ಯೂ ಹಿನ್ನೆಲೆ ನಗರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸರಿಗೆ ಮಹಿಳೆಯೊಬ್ಬರು ಅವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ.
ಶನಿವಾರ ಬೆಳಗ್ಗೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ಚೆಕ್‌ಪೋಸ್ಟ್‌ನಲ್ಲಿ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಸಾಮಾಜಿಕ ಕಾರ್ಯಕರ್ತೆ ನೀತಾ ಕಾಮತ್ ಎಂಬುವರು ಮೊಬೈಲ್‌ನಲ್ಲಿ ಮಾತನಾಡಿಕೊಂಡೇ ಕಾರು ಚಾಲನೆ ಮಾಡುತ್ತಿದ್ದರು. ಅವರ ಕಾರನ್ನು ಅಡ್ಡಗಟ್ಟಿದ ಸಂಚಾರ ಪೊಲೀಸ್ ಠಾಣೆ ಎಸ್‌ಐ ಖಾದರ್, ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಕಟ್ಟುವಂತೆ ಸೂಚಿಸಿದ್ದಾರೆ.
ಇದಕ್ಕೊಪ್ಪದ ಮಹಿಳೆ, ಪೊಲೀಸರೊಂದಿಗೆ ಏರುಧ್ವನಿಯಲ್ಲೇ ಮಾತನಾಡುತ್ತ ತಪ್ಪನ್ನು ಸಮರ್ಥಿಸಿಕೊಂಡು ವಾಗ್ವಾದ ನಡೆಸಿದ್ದಾರೆ. ನಂಗೆ ರೈಟ್ಸ್ ಇದೆ. ಟೈಮ್ ಇಲ್ಲ, ನೀವು ಬೊಬ್ಬೆ ಹಾಕಬೇಡಿ ಎಂದು ಆವಾಜ್ ಹಾಕಿದ್ದಾರೆ. ಬಳಿಕ ಗೂಗಲ್‌ಪೇ ಮೂಲಕ ದಂಡ ಪಾವತಿಸಿ ಮಹಿಳೆ, ನಿಮ್ಮೊಂದಿಗೆ ಆಮೇಲೆ ಮಾತನಾಡುತ್ತೇನೆ ಎಂದಿದ್ದಾರೆ.
ಟ್ರಾಫಿಕ್ ಪೊಲೀಸರು 3 ಸಾವಿರ ರೂ. ದಂಡ ಕಟ್ಟಿಸಿಕೊಂಡು ಮಹಿಳೆಗೆ ರಶೀದಿ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಎಂದು ಮಹಿಳೆಗೆ ನಗರಸಭೆಯಿಂದ ಪಾಸ್ ನೀಡಿದ್ದಾರೆ. ಈ ಬಗ್ಗೆ ನಾವು ಪ್ರಶ್ನಿಸಿಲ್ಲ, ಆದರೆ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಕಾರು ಚಾಲನೆ ಮಾಡುತ್ತಿದ್ದರು. ದಂಡ ವಿಧಿಸಿದ್ದಕ್ಕೆ ನಮ್ಮೊಂದಿಗೆ ವಾಗ್ವಾದ ನಡೆಸಿದರು ಎಂದು ಎಸ್‌ಐ ಖಾದರ್ 'ವಿಜಯವಾಣಿ'ಗೆ ತಿಳಿಸಿದ್ದಾರೆ.