

ಭದ್ರಾವತಿ: ಬಿ.ಎಚ್.ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ರಾತ್ರಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ ಗುಂಪೊಂದು ರಸ್ತೆ ಮಧ್ಯದಲ್ಲಿ ಪಟಾಕಿ ಸಿಡಿಸಿದ್ದರಿಂದ 20 ನಿಮಿಷಕ್ಕೂ ಅಧಿಕ ಸಮಯ ಸಂಚಾರಕ್ಕೆ ಅಡಚಣೆಯಾಗಿತ್ತು.
ಸರಣಿ ಪಟಾಕಿಯ ಸಿಡಿತಕ್ಕೆ ಹೆದರಿದ ಸವಾರರು ತಮ್ಮ ವಾಹನಗಳನ್ನು ರಸ್ತೆ ಮಧ್ಯದಲ್ಲೇ ನಿಲ್ಲಿಸಿಕೊಂಡರು. ಇದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ನಾಗರಿಕರಿಗೆ ಕಿರಿಕಿರಿಯಾಯಿತು. ಸ್ಥಳೀಯರು ಪೊಲೀಸರ ಕಾರ್ಯವೈಖರಿಯನ್ನು ಖಂಡಿಸಿ ಪಟಾಕಿ ಸಿಡಿತ ಮುಗಿದ ಮೇಲೆ ಸಂಚರಿಸಿದರು.
ಬಿ.ಎಚ್.ರಸ್ತೆ ರಾಷ್ಟ್ರೀಯ ಹೆದ್ದಾರಿ. ಅದರಲ್ಲೂ ನಗರದ ಮಧ್ಯಭಾಗದಲ್ಲಿ ಮೈಸೂರು, ಬೆಂಗಳೂರು, ಚನ್ನಗಿರಿ, ದಾವಣಗೆರೆ ಸೇರಿ ಹಲವು ಕಡೆಗಳಿಂದ ಬಸ್, ಕಾರು, ಲಾರಿಗಳು ಮತ್ತಿತರ ವಾಹನಗಳ ಸಂಚಾರ ಅಧಿಕವಾಗಿರುತ್ತದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಸಾಗಿಸುವ ವಾಹನಗಳೂ ಇರುತ್ತವೆ. ಇಂತಹ ಸಂಭ್ರಮವನ್ನು ಜನನಿಬಿಡ ಪ್ರದೇಶದಲ್ಲಿ ಆಚರಿಸಿಕೊಳ್ಳುವುದು ಸರಿಯಲ್ಲ. ವಾಹನಗಳ ಮೇಲೆ ಪಟಾಕಿಯ ಕಿಡಿ ಬಿದ್ದು ಅನಾಹುತ ಉಂಟಾದರೆ ಯಾರು ಹೊಣೆ ಎಂದು ನಾಗರಿಕರು ಹಿಡಿಶಾಪ ಹಾಕಿದರು.
ಇತ್ತೀಚೆಗೆ ಭದ್ರಾವತಿಯಲ್ಲಿ ಪ್ರತಿಯೊಂದು ವಾರ್ಡ್, ಬಡಾವಣೆ, ಕೇರಿಗಳಲ್ಲಿಯೂ ರಾಜಕೀಯದಲ್ಲಿ ಗುರುತಿಸಿಕೊಂಡ ಯುವನಾಯಕರ ಹುಟ್ಟುಹಬ್ಬವನ್ನು ಆ ಕೇರಿಯ ರಸ್ತೆಯಲ್ಲೇ ಕಟೌಟ್ ಹಾಕಿ, ಬೈಕ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಪಟಾಕಿ ಸಿಡಿಸುವ ಪರಿಪಾಠ ಬೆಳೆಯುತ್ತಿದೆ. ಇದರಿಂದಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಹುಟ್ಟು ಹಬ್ಬದ ನೆಪದಲ್ಲಿ ಪಟಾಕಿ ಸಿಡಿಸುವುದು, ನಗರದೆದ ಮುಖ್ಯರಸ್ತೆಯಲ್ಲಿ ಫ್ಲೆಕ್ಸ್, ಬಂಟಿಂಗ್ಸ್ ಅಳವಡಿಸುವುದು ಕಾನೂನಿಗೆ ವಿರುದ್ಧ. ಕೆಲವರು ನಗರಸಭೆ ಅನುಮತಿ ಪಡೆಯದೆ ಕಟೌಟ್ ನಿಲ್ಲಿಸುತ್ತಾರೆ. ನಗರಸಭೆ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಹೇಳಿದರು.