

ಚೆನ್ನೈ: ಕರೊನಾ ಸಂಕಷ್ಟಕಾಲದಲ್ಲಿ ನಲುಗಿರುವ ರಾಜ್ಯದ ಜನತೆ ತಮಿಳುನಾಡು ನೂತನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬಂಪರ್ ಕೊಡುಗೆ ಘೋಷಿಸಿದ್ದಾರೆ.
ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ರಾಜ್ಯದ ವಿದ್ಯಾರ್ಥಿಗಳಿಗೆ ಕರೊನಾಗೆ ಉಚಿತ ಚಿಕಿತ್ಸೆ ಕೊಡುವುದಾಗಿ ಸ್ಟಾಲಿನ್ ಹೇಳಿದ್ದಾರೆ. ಫ್ಯಾಮಿಲಿ ಕಾರ್ಡ್ (ಪಡಿತರ ಕಾರ್ಡ್) ಹೊಂದಿರುವ ಕುಟುಂಬಗಳಿಗೆ ಪ್ರತಿ ವರ್ಷ ರಾಜ್ಯ ಸರ್ಕಾರ 4 ಸಾವಿರ ರೂಪಾಯಿ ಸಹಾಯಧನ ನೀಡಲಿದೆ. ಉನ್ನತ ಶಿಕ್ಷಣ ವಿದ್ಯಾಭ್ಯಾಸ ಮಾಡುತ್ತಿರುವ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಸಾಮಾನ್ಯ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ. ಗ್ರಾಹಕರ ಅನುಕೂಲಕ್ಕಾಗಿ ಹಾಲಿನ ಖರೀದಿದರವನ್ನು ಲೀಟರ್ಗೆ 3 ರೂಪಾಯಿ ಇಳಿಸಲಾಗಿದೆ. ಮುಖ್ಯಮಂತ್ರಿ ಆರೋಗ್ಯ ವಿಮೆ ಯೋಜನೆಯನ್ನ ಖಾಸಗಿ ಆಸ್ಪತ್ರೆಗಳಿಗೂ ವಿಸ್ತರಿಸಲಾಗಿದ್ದು, ಕರೊನಾ ಸೋಂಕಿತರು ಈ ಯೋಜನೆಯಡಿ ಚಿಕಿತ್ಸೆ ಪಡೆಯಬಹುದು ಎಂದು ಸ್ಟಾಲಿನ್ ಘೋಷಿಸಿದ್ದಾರೆ.
ಇಂದು(ಶುಕ್ರವಾರ) ಬೆಳಗ್ಗೆ ಡಿಎಂಕೆ(ದ್ರಾವಿಡ ಮುನ್ನೇತ್ರ ಕಳಗಂ) ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಚೆನ್ನೈನ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರ ಬೆನ್ನಲ್ಲೇ ರಾಜ್ಯದ ಜನತೆಗಾಗಿ ಹಲವು ಪ್ರಮುಖ ಯೋಜನೆಗಳನ್ನ ಘೋಷಿಸಿದ್ದಾರೆ.