ಧಾರವಾಡದಲ್ಲಿ ಭೀಕರ ಅಪಘಾತ; ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಐವರು

accident highway
Published on

ಧಾರವಾಡ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಫಘಾತ ಸಂಭವಿಸಿದ್ದು ಸ್ಥಳದಲ್ಲಿಯೇ ಐವರು ಮೃತಪಟ್ಟಿರುವ ಘಟನೆ ನಡೆದಿದೆ. ಧಾರವಾಡ ತಾಲೂಕಿನ‌ ತೇಗೂರ ಗ್ರಾಮದ ಬಳಿ ಘಟನೆ ನಡೆದಿದೆ. ನಾಗಪ್ಪ ಈರಪ್ಪ ಮುದ್ದೋಜಿ (29), ಮಹಾಂತೇಶ್ ಬಸಪ್ಪ ಮುದ್ದೊಜಿ(40), ಬಸವರಾಜ್ ಶಿವಪುತ್ರಪ್ಪ ನರಗುಂದ(35), ಶ್ರೀಕುಮಾರ್ ನರಗುಂದ(05), ಪಾದಚಾರಿ ಈರಣ್ಣಾ ಗುರುಸಿದ್ದಪ್ಪ ರಾಮನಗೌಡರ್(35) ಮೃತಪಟ್ಟವರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಬಂದು ಗುದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಹೋಗಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ಪಕ್ಕದಲ್ಲಿ ಹೋಗುತ್ತಿದ್ದ ಪಾದಾಚಾರಿಗೂ ಕಾರು ತಾಗಿದ್ದು, ಆತನೂ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾನೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಜಿಲ್ಲಾಧ್ಯಕ್ಷರ ಕಾರು ಹಾಗೂ ಟ್ಯಾಂಕರ್ ನಡುವೆ ಅಪಘಾತ; ಮೂವರು ಗಂಭೀರ

ಕಾರು ಬೆಳಗಾವಿಯಿಂದ ಧಾರವಾಡಕ್ಕೆ ಬರುತ್ತಿದ್ದಂತೆ ಈ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗರಗ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ರವಣಕುಮಾರ್ ಬಸವರಾಜ ನರಗುಂದ(07) ಮತ್ತು ಮಡಿವಾಳಪ್ಪ ರಾಜು ಅಳ್ನಾವರ (22) ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net