

ರಾಣೆಬೆನ್ನೂರು: ಪ್ರಾಥಮಿಕ ಶಾಲೆ ಶಿಕ್ಷಕಿಯೊಬ್ಬರು ಕೋಟಿ ರೂ. ಆಸೆಗೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ. ಇಲ್ಲಿಯ ಬೀರೇಶ್ವರ ನಗರದ ನಿವಾಸಿ ಹಾಗೂ ತಾಲೂಕಿನ ಚಿಕ್ಕಮಾಗನೂರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಮೋಸ ಹೋದವರು.
ಇರ ಮೊಬೈಲ್‌ಗೆ ವಾಟ್ಸ್‌ಆ್ಯಪ್ ಗ್ಲೋಬಲ್ ಅವಾರ್ಡ್ ಕಂಪನಿಯ ಪ್ರೊಸೆಸಿಂಗ್ ಮ್ಯಾನೇಜರ್ ಡಾ. ಥಾಮಸ್ ವಿಲಿಯಮ್ಸ್ ಮತ್ತು ಅಲೆಕ್ಷಾಂಡರ್ ಜೈನ್ ಎಂದು ಹೇಳಿಕೊಂಡ ಇಬ್ಬರು ‘ನೀವು ವಾಟ್ಸ್‌ಆ್ಯಪ್ ಗ್ಲೋಬಲ್ ಅವಾರ್ಡ್ ವಿನ್ನರ್ ಆಗಿದ್ದೀರಿ. ನಿಮಗೆ 4.80 ಕೋಟಿ ರೂ. ಬಹುಮಾನ ಬಂದಿದೆ’ ಎಂದು ಮೆಸೇಜ್ ಕಳುಹಿಸಿದ್ದರು. ಇದನ್ನೂ ಓದಿ: ಶಾಸಕರ ಭವನಕ್ಕೆ ಕರೊನಾ ಆತಂಕ; ಇಡೀ ಕಟ್ಟಡ ಸ್ಯಾನಿಟೈಸ್, ಅನಗತ್ಯ ಪ್ರವೇಶ ನಿರ್ಬಂಧ
ಶಿಕ್ಷಕಿ ಮೆಸೇಜ್‌ಗೆ ಮರು ಉತ್ತರ ನೀಡುತ್ತಿದ್ದರಿಂದ ಖದೀಮರು ಬಹುಮಾನ ಕೊಡುವ ಬಗ್ಗೆ ಹಲವು ಬಾರಿ ಇ-ಮೇಲ್ ಮಾಡಿ ನಂಬಿಕೆ ಹುಟ್ಟಿಸಿದ್ದರು. ನಂತರ ಅವರಿಗೆ ಫೋನ್ ಮಾಡಿ ‘ಯುಎಸ್‌ಎ ಡಾಲರನ್ನು ರೂಪಾಯಿಯಲ್ಲಿ ವಿನಿಮಯ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಹಲವು ಸರ್ವೀಸ್ ಚಾರ್ಜ್ ಕಟ್ಟಬೇಕು’ ಎಂದು ನಂಬಿಸಿ ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ 37.15 ಲಕ್ಷ ರೂ. ಹಾಕಿಸಿಕೊಂಡಿದ್ದಾರೆ. ಇದನ್ನೂ ಓದಿ: ರೈಲ್ವೆ ಸ್ಟಾಲ್ಗಳಲ್ಲಿ ಸಿಗಲಿದೆ ಕರೊನಾ ತಡೆ ಅಗತ್ಯವಸ್ತುಗಳು
ಇದಾದ ನಂತರ ತಿಂಗಳು ಕಳೆದರೂ ಶಿಕ್ಷಕಿಯ ಖಾತೆಗೆ ಹಣ ಜಮಾ ಆಗಲಿಲ್ಲ. ಇದರಿಂದ ಅನುಮಾನಗೊಂಡು ವಾಪಸ್ ಅವರಿಗೆ ಕಾಲ್ ಮಾಡಿದರೆ, ಫೋನ್ ಕನೆಕ್ಟ್ ಆಗಿಲ್ಲ. ಇದರಿಂದ ತಾನು ಮೋಸ ಹೋಗಿದ್ದೇನೆ ಎಂದು ತಿಳಿದ ಶಿಕ್ಷಕಿ ಇದೀಗ ಹಾವೇರಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಶಿಕ್ಷಕಿಯು ಹೆಚ್ಚಿನ ಹಣ ಬರುವ ಆಸೆಯಿಂದ 37 ಲಕ್ಷ ರೂ.ಗಳನ್ನು ಬೇರೆ ಬೇರೆ ಕಡೆ ಸಾಲ ತೆಗೆದುಕೊಂಡು ಖದೀಮರಿಗೆ ನೀಡಿದ್ದಾಳೆ. ಆದರೆ, ಖದೀಮರ ಕೈಚಳಕಕ್ಕೆ ಸಿಲುಕಿ ಸಂಪೂರ್ಣ ಹಣ ನೀರು ಪಾಲಾದಂತಾಗಿದೆ. ಶಿಕ್ಷಕಿ ಈಗ ಕಣ್ಣೀರು ಹಾಕುತ್ತಿದ್ದಾರೆ.