

ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು
ಪರ್ಯಾಯ ಪುತ್ತಿಗೆ ಮಠ, ಉಡುಪಿ
ಆಚಾರ್ಯರು ನೀಡಿದ ಈ ತತ್ವ ಸಿದ್ಧಾಂತ ಅತ್ಯಂತ ಉತ್ಕೃಷ್ಟವಾದದ್ದು. ಅಂದರೆ, ಹೇಗೆ ಹಾಲಿನಿಂದ ನಾವು ಮೊಸರು, ಮಜ್ಜಿಗೆ, ಬೆಣ್ಣೆ ಹಾಗೂ ಕೊನೆಯಲ್ಲಿ ಘೃತ (ತುಪ್ಪ)ವನ್ನು ಪಡೆಯುತ್ತೇವೆಯೋ ಹಾಗೆಯೇ ವೇದಗಳಿಂದ ಮೊದಲು ಮೊಸರು, ಮಜ್ಜಿಗೆ, ಬೆಣ್ಣೆಗಳ ರೂಪದಲ್ಲಿ ಅನೇಕ ಗ್ರಂಥಗಳು ಬಂದವು. ಆದರೆ, ಮಧ್ವಾಚಾರ್ಯರ ಈ ತತ್ವ ಸಿದ್ಧಾಂತ ಮೊಸರಿನ ಕೊನೆಯಲ್ಲಿ ತುಪ್ಪ ಬರುವ ಹಾಗೆ ಅಂತಿಮ ಸ್ವರೂಪದ್ದು. ತುಪ್ಪದ ನಂತರ ಬೇರೇನೂ ಉದ್ಭವಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಮಧ್ವಾಚಾರ್ಯರ ಸಿದ್ಧಾಂತದ ನಂತರ ಬೇರೇನೂ ಇರಲು ಸಾಧ್ಯವಿಲ್ಲ. ಹಾಲಿನಿಂದ ಕೊನೆಯಲ್ಲಿ ಹೇಗೆ ತುಪ್ಪ ಅಂತಿಮವಾಗಿದೆಯೋ ಹಾಗೆಯೇ ವೇದ, ಉಪನಿಷತ್ತುಗಳ ಅಂತಿಮ ಸ್ವರೂಪವೇ ಮಧ್ವಾಚಾರ್ಯರ ದ್ವೆ ೖತ ಸಿದ್ಧಾಂತವಾಗಿದೆ.
ಮಧ್ವಾಚಾರ್ಯರಿಂದ ರಚಿತ ಇಂತಹ ಶ್ರೇಷ್ಠ ದ್ವೆ ೖತ ವಾದವನ್ನು ಸಿದ್ಧಾಂತ ಎಂದು ನಾವು ಗುರುತಿಸಬೇಕೆಂದು ಶ್ರೀವಾದಿರಾಜರು ಹೇಳುತ್ತಾರೆ. ‘ಅಂತೇ ಸಿದ್ಧಸ್ತು ಸಿದ್ಧಾಂತಃ ಮಧ್ವಸ್ಯ ಆಗಮ ಏವ ಹಿ’ ಎಂಬಂತೆ ದ್ವೈತ ಸಿದ್ಧಾಂತವು ವೇದಗಳ ಅಂತಿಮವಾದ ನಿರ್ಣಯ ಆಗಿದೆ. ಹೀಗಾಗಿ ದ್ವೆ ೖತ ಸಿದ್ಧಾಂತವನ್ನು ವೇದಾಂತಗಳ ಮಥನದ, ಚಿಂತನಾ ಸತ್ಯದ ಕೊನೆಯಲ್ಲಿ ಬಂದ ಅಮೃತ ಎಂದು ಭಾವಿಸಬೇಕು. ಈ ಸಿದ್ಧಾಂತ ತುಪ್ಪ ಹಾಗೂ ಮಧು (ಜೇನುತಪ್ಪ)ವಿನಂತೆ ಅಂತಿಮ ಸ್ವರೂಪದ್ದು. ತುಪ್ಪದಂತೆ ಜೇನುತುಪ್ಪವೂ ಹಲವಾರು ಪುಷ್ಪಗಳ ಮಕರಂದದ ಅಂತಿಮ ಸ್ವರೂಪ. ಹಾಗೆಯೇ ಮಧ್ವಾಚಾರ್ಯರು ಎಲ್ಲ ಪ್ರಮಾಣ ಗ್ರಂಥಗಳ ಸಾರವನ್ನು ಸಂಗ್ರಹಿಸಿ ಅದನ್ನು ಮಧ್ವ ಸಿದ್ಧಾಂತವಾಗಿ ನೀಡಿದ್ದಾರೆ. ಇದನ್ನು ‘ಮಧುಕರ ಸಿದ್ಧಾಂತ’ ಎಂದೂ ಕರೆಯಬಹುದು.
ಮಧ್ವಾಚಾರ್ಯರು ನೀಡಿದ ಮತ್ತೊಂದು ಪ್ರಮುಖ ಸಂದೇಶ ಏನೆಂದರೆ, ಮಧುಕರ ವೃತ್ತಿ. ಆಚಾರ್ಯರೇ ಹೇಳಿರುವಂತೆ, ‘ಎಲ್ಲ ಸಿದ್ಧಾಂತಗಳ ಸಾರವನ್ನು ಸಂಗ್ರಹಿಸಿ, ನಿಜವಾದ ಹಾಗೂ ವಾಸ್ತವವಾದ ವಿಚಾರವೇನಿದೆಯೋ ಅದೇ ನನ್ನ ತತ್ವವಾದ’. ಹೀಗಾಗಿ ಆಚಾರ್ಯರ ಮೂಲದೃಷ್ಟಿ ವಾಸ್ತವವನ್ನು ಗುರುತಿಸುವುದಾಗಿದೆ. ಅಂತಹ ಒಂದು ಸ್ವರೂಪವನ್ನು ಮಧ್ವಾಚಾರ್ಯರು ಜಗತ್ತಿಗೆ ಕೊಟ್ಟಿದ್ದಾರೆ. ಇನ್ನೊಂದು ಉದಾಹರಣೆ ನೀಡಬೇಕೆಂದರೆ, ವೈಜ್ಞಾನಿಕ ಬೆಳವಣಿಗೆಯಲ್ಲಿ ಮೊದಲು ಒಬ್ಬ ವಿಜ್ಞಾನಿ ವಾದ ಮಂಡಿಸುತ್ತಾನೆ, ಆಮೇಲೆ ಒಂದಿಷ್ಟು ವರ್ಷಗಳ ಬಳಿಕ ಇನ್ನೋರ್ವ ವಿಜ್ಞಾನಿ ಅದನ್ನು ಪರಿಷ್ಕರಿಸಿ, ಬೇರೆ ಆಯಾಮ ನೀಡುತ್ತಾನೆ. ಹೀಗೆ ಒಬ್ಬರ ನಂತರ ಮತ್ತೊಬ್ಬ ವಿಜ್ಞಾನಿಗಳು ಬೇರೆ ಬೇರೆಯಾದ ಆವಿಷ್ಕಾರ ಮಾಡುತ್ತಾರೆ. ಅದರಂತೆಯೇ ವೇದಾಂತಗಳ ಪ್ರಪಂಚದಲ್ಲಿಯೂ ಅನೇಕ ಮಥನ ನಡೆದು ಬೇರೆ ಬೇರೆ ಸಿದ್ಧಾಂತಗಳು ಬಂದಿವೆ. ಅದರಲ್ಲಿ ಮಧ್ವಾಚಾರ್ಯರ ದ್ವೈತ ಸಿದ್ಧಾಂತ ಅಂತಿಮವಾದುದಾಗಿದೆ.
ಯಾವಾಗಲೂ ವೈದಾಂತಿಕ ವಿಮರ್ಶೆಗಳು ವಾದಗಳ ದೃಷ್ಟಿಯಲ್ಲಿ ನಡೆಯಬೇಕೇ ಹೊರತು ಭಾವನೆಗಳ ದೃಷ್ಟಿಯಲ್ಲಿ ನಡೆಯಬಾರದು. ವಾದಗಳ ದೃಷ್ಟಿಯಲ್ಲಿ ನೋಡುವುದಾದರೆ, ಕೋರ್ಟ್ನಲ್ಲಿ ನ್ಯಾಯವಾದಿಗಳು ಹೇಗೆ ಬೇರೆ ಬೇರೆ ವಾದ ಮಂಡಿಸಿದಾಗ ನ್ಯಾಯಾಧೀಶರು ಅಂತಿಮ ತೀರ್ಪು ಕೊಡುತ್ತಾರೆಯೋ ಹಾಗೆಯೇ ವೇದಾಂತ ಪ್ರಪಂಚದಲ್ಲಿಯೂ ಎಲ್ಲ ವಾದಗಳನ್ನು ಆಲಿಸಿ, ನಾವೇ ನ್ಯಾಯಾಧೀಶರಾಗಿ ನಮ್ಮದೇ ಆದ ಸಿದ್ಧಾಂತ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಮಧ್ವಾಚಾರ್ಯರ ದೃಷ್ಟಿಕೋನ. ಅದನ್ನೇ ಶ್ರೀಕೃಷ್ಣನ ಅಂತಿಮ ಸಂದೇಶ ಎಂದೂ ಹೇಳಬಹುದು.
ಗೀತೆಯಲ್ಲಿಯೂ ಶ್ರೀಕೃಷ್ಣ ವಿಸ್ತಾರವಾಗಿ ತನ್ನ ವಾದ ಮಂಡಿಸುತ್ತಾನೆ. ಕುರುಕ್ಷೇತ್ರದಲ್ಲಿ ಅರ್ಜುನ ಯುದ್ಧ ಮಾಡುವುದಿಲ್ಲ ಎಂದು ವಾದ ಮಾಡಿದಾಗ, ಕೃಷ್ಣನು, ‘ಯುದ್ಧ ಮಾಡಲೇಬೇಕು’ ಎಂದು ವಾದ ಮಂಡಿಸುತ್ತಾನೆ. ಆದರೂ ಕೊನೆಯಲ್ಲಿ ‘ವಿಮೃಶ್ಯೇತತ್ ಅಶೇಷೇಣ ಯಥೇಚ್ಛಸಿ ತಥಾ ಕುರು’ ಎಂಬುದಾಗಿ ಹೇಳುತ್ತಾನೆ. ಅಂದರೆ, ‘ನಾನು ನನ್ನ ವಾದ ಮಂಡಿಸಿದ್ದು, ಅದನ್ನು ನೀನು ಒಪ್ಪಲೇಬೇಕೆಂದೇನೂ ಇಲ್ಲ. ನಿನ್ನ ಮನಸ್ಸಿಗೆ ಇದು ಸರಿಯೆನಿಸಿದರೆ ಮಾತ್ರ ಸ್ವೀಕಾರ ಮಾಡು’ ಎನ್ನುತ್ತಾನೆ. ಶ್ರೀಕೃಷ್ಣನ ಈ ದೃಷ್ಟಿಕೋನದಂತೆಯೇ ಮಧ್ವಾಚಾರ್ಯರೂ ವೇದಾಂತಗಳ ವಿಚಾರವಾಗಿ ಕೂಲಂಕಷವಾಗಿ, ವಸ್ತುನಿಷ್ಠವಾಗಿ, ಪ್ರಾಮಾಣಿಕವಾಗಿ ನಾವು ಚಿಂತನೆ ನಡೆಸಬೇಕಿದೆ. ಆ ಚಿಂತನೆ ಹಿಡಿಸಿದರೆ ಮಾತ್ರ ಅದನ್ನು ಒಪ್ಪಿ ಅನುಷ್ಠಾನಕ್ಕೆ ತರಬೇಕು ಎಂದಿದ್ದಾರೆ.
ಮಧ್ವ ಸಿದ್ಧಾಂತ ಮಧುಕರ ವೃತ್ತಿಯನ್ನು ಸಂದೇಶಿಸುವಂತಹ ಸಿದ್ಧಾಂತವಾಗಿದೆ. ಇಂತಹ ಸಿದ್ಧಾಂತವನ್ನು ಎಲ್ಲ ಜಿಜ್ಞಾಸುಗಳು ಪರಿಗಣನೆ ಮಾಡಬೇಕು, ವಿಮರ್ಶೆ ಮಾಡಬೇಕು, ಅದರ ಸಾರ ಗ್ರಹಣ ಮಾಡಬೇಕು ಎನ್ನುವುದಾಗಿ ಮಧ್ವ ನವಮಿಯ ಈ ಸಂದರ್ಭದಲ್ಲಿ ನಾವು ಹಾರೈಸುತ್ತೇವೆ. ಸರ್ವರಿಗೂ ಉಡುಪಿ ಶ್ರೀಕೃಷ್ಣನ ಅನುಗ್ರಹ ಲಭಿಸಲೆಂದು ಆಶೀರ್ವದಿಸುತ್ತೇವೆ.
ಹರಿ ಸವೋತ್ತಮತ್ವ ವಾದ : ಮಧ್ವಾಚಾರ್ಯರು ವೇದಗಳ ಹಿನ್ನೆಲೆಯಲ್ಲಿ ಸುಂದರವಾದಂತಹ ‘ಹರಿ ಸವೋತ್ತಮತ್ವ’ ಎಂಬ ವಾದ ಮಂಡಿಸಿದ್ದಾರೆ. ಇದು ಸೂಕ್ಷ್ಮವಾದ ವಿಚಾರವಾಗಿದೆ. ಅಂತಿಮವಾಗಿ ಹರಿಯೇ ಸವೋತ್ತಮ ಎಂದರೆ, ಈ ಜಗತ್ತಿಗೆ ಸವೋತ್ತಮನಾದಂಥ ದೇವರು ಇರಲೇಬೇಕು. ಅದು ಹರಿ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ನೀವು ಯಾವುದೇ ಹೆಸರಿನಿಂದ ಬೇಕಾದರೂ ಅವನನ್ನು ಕರೆಯಿರಿ. ಆದರೆ, ಒಬ್ಬ ಸವೋತ್ತಮನಾದಂಥ ವ್ಯಕ್ತಿ ಈ ಜಗತ್ತನ್ನು ಮುನ್ನಡೆಸುತ್ತಿದ್ದಾನೆ ಎಂಬ ತತ್ವವನ್ನು ಪ್ರತಿಯೊಬ್ಬರೂ ಒಪ್ಪಬೇಕು. ‘ಯೋ ದೇವಾನಾಂ ನಾಮಧಾ ಏಕಃ ಏವ’ ಎಂಬಂತೆ ಅಥವಾ ‘ಏಕೋ ದೇವಃ ಸರ್ವ ಭೂತೇಷು ಗೂಢ’ ಎಂಬಂತೆ ನಾಮ (ಹೆಸರು)ದಲ್ಲಿ ಯಾವುದೇ ತಕರಾರು ಇಲ್ಲ. ನಿಮಗಿಷ್ಟವಾದ ಹೆಸರನ್ನು ಸವೋತ್ತಮತ್ವ ವಾದಕ್ಕೆ ಇಡಬಹುದು. ನಾವು ಅವನಿಗೆ ಹರಿ ಎಂದು ಕರೆಯುತ್ತೇವೆ. ನಿಮಗಿಷ್ಟವಾದ ಹೆಸರಿನಲ್ಲಿ ಅವನನ್ನು ಕರೆಯಬಹುದು. ಏಕೆಂದರೆ, ಎಲ್ಲ ಹೆಸರುಗಳೂ ಹರಿಯದ್ದೇ ಆಗಿದೆ. ಒಟ್ಟಾರೆಯಾಗಿ ಅಂತಿಮ ತಾತ್ಪರ್ಯ ಸವೋತ್ತಮನಾದಂಥ ಒಬ್ಬ ವ್ಯಕ್ತಿ ಈ ಜಗತ್ತನ್ನು ನಡೆಸುತ್ತಿದ್ದಾನೆ ಎನ್ನವುದು ‘ಹರಿ ಸವೋತ್ತಮತ್ವ’ ವಾದದ ಸಾರವಾಗಿದೆ. ಜಗತ್ತಿನ ಚಿಂತಕರು ಮಧ್ವ ಸಿದ್ಧಾಂತವನ್ನು ನೋಡಿ ಇದನ್ನು ಜಾಗತಿಕ ಅದ್ಭುತ, ಅತ್ಯಂತ ವಸ್ತುನಿಷ್ಠ ಎಂಬುದಾಗಿ ಉಲ್ಲೇಖಿಸಿದ್ದಾರೆ.