

ಲಖನೌ: ಭಾರತೀಯ ಸೇನೆಯ ಯೋಧರನ್ನೇ ತಮ್ಮ ಬ್ಲಾಕ್ಮೇಲ್ ಟಾರ್ಗೆಟ್ಗಳಾಗಿ ಮಾಡಿಕೊಳ್ಳುತ್ತಿದ್ದ ಗ್ಯಾಂಗ್ ಒಂದನ್ನು ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಓರ್ವ ಮಹಿಳೆಯೂ ಇರುವ ಈ ಗ್ಯಾಂಗ್ ರಾಜಸ್ಥಾನ, ಹರಿಯಾಣ ಮತ್ತು ಗುಜರಾತ್ನ ಸೈನಿಕರನ್ನು ಗುರಿಯಾಗಿಸಿಕೊಂಡಿತ್ತು ಎನ್ನಲಾಗಿದೆ.
ಇತ್ತೀಚೆಗೆ ಗ್ಯಾಂಗ್ನ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಯುವತಿಯು ಸಾಮಾಜಿಕ ಜಾಲತಾಣಗಳಲ್ಲಿ ಯೋಧರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು, ನಂತರ ಅವರ ಅಶ್ಲೀಲ ಚಿತ್ರಗಳನ್ನು ಚಿತ್ರಿಸಿ, ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು, ಸೈಬರ್ ಸೆಲ್ಗಳ ಸಹಾಯದಿಂದ ಗ್ಯಾಂಗ್ನ್ನು ಪತ್ತೆ ಹಚ್ಚಿದ್ದಾರೆ.
ಓರ್ವ ಮಹಿಳೆ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಮುಖ್ಯ ಆರೋಪಿಗಳ ಸ್ಥಾನದಲ್ಲಿರುವ ಮಹಿಳೆ ಮತ್ತು ಆಕೆಯ ಸಂಗಾತಿಯನ್ನು ಪೊಲೀಸರು ಮಾಧ್ಯಮಗಳ ಮುಂದೆ ನಿಲ್ಲಿಸಿದ್ದಾರೆ. ಆರೋಪಿಗಳು ತಾವು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸೈನಿಕರಷ್ಟೇ ಅಲ್ಲದೆ ಕೆಲ ಸಾಮಾನ್ಯ ಜನರಿಗೂ ಈ ರೀತಿ ಬ್ಲಾಕ್ಮೇಲ್ ಮಾಡಿರುವುದಾಗಿ ಅವರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)