

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ರೈತ ಹೋರಾಟ ದಿನೇದಿನೆ ಕಾವು ಹೆಚ್ಚಿಸಿಕೊಳ್ಳುತ್ತಲೇ ಇದೆ. ಕೇಂದ್ರದೊಂದಿಗಿನ ಮಾತುಕಥೆಯೂ ಹಲವು ಬಾರಿ ವಿಫಲವಾಗಿದೆ. ಇದೀಗ ರೈತರೊಂದಿಗೆ ಮಾತನಾಡಲು ಪ್ರಧಾನಿ ನರೇಂದ್ರ ಮೋದಿಯವರು ಮುಂದೆ ಬಂದಿದ್ದಾರೆ. ಕ್ರಿಸ್ಮಸ್ ದಿನವಾದ ಡಿಸೆಂಬರ್ 25ರಂದು ಪ್ರಧಾನಿಯವರು ದೇಶದ ರೈತರೊಂದಿಗೆ ಸಭೆ ನಡೆಸಲಿದ್ದು, 9 ಕೋಟಿ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಶುಕ್ರವಾರದಂದು ಮೋದಿಯವರು ಆರು ರಾಜ್ಯಗಳ ರೈತರೊಂದಿಗೆ ಸಭೆ ನಡೆಸಲಿದ್ದಾರೆ. ದೇಶದಲ್ಲಿ ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅನುಭವವನ್ನು ಈ ರೈತರು ಪ್ರಧಾನಿಯೊಂದಿಗೆ ಹಂಚಿಕೊಳ್ಳಲಿದ್ದಾರೆ. ನೂತನ ಕೃಷಿ ಕಾಯ್ದೆಗಳ ಬಗ್ಗೆಯೂ ಮೋದಿಯವರು ಮಾತನಾಡಲಿದ್ದಾರೆ. ಅದರ ಜತೆ ಪಿಎಂ ಕಿಸಾನ್ ಯೋಜನೆಯ 18,000 ಕೋಟಿ ರೂಪಾಯಿ ಆರ್ಥಿಕ ಸಹಾಯವನ್ನೂ ಬಿಡುಗಡೆ ಮಾಡಲಿದ್ದಾರೆ.
ದೇಶದ ರೈತರಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಅವರು ಪತ್ರವನ್ನು ಬರೆದಿದ್ದು, ಆ ಪತ್ರವನ್ನೂ ಸಭೆಯಲ್ಲಿ ಬಿತ್ತರಿಸಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)