

ಆಯುರ್ವೆದ ಆಚಾರ್ಯರಾದ ಚರಕ ಮಹರ್ಷಿಗಳು ತಪಸ್ಸನ್ನೂ ರೋಗನಾಶಕವಾದ ಒಂದು ದಿವ್ಯರಸಾಯನವನ್ನಾಗಿ ಹೇಳಿದ್ದಾರೆ. ತಪಸ್ಸೆಂದರೆ ಉಪವಾಸಾದಿ ಕಠಿಣ ವ್ರತಗಳಿಂದ ತನ್ನನ್ನು ತಾನು ತಪಿಸಿಕೊಂಡು ಪರಿಶುದ್ಧವಾಗುವುದು. ಸಮುದ್ರದ ನೀರು ಸೂರ್ಯನ ಕಠೋರವಾದ ಬಿಸಿಲಿನ ತಾಪವನ್ನು ಸಹಿಸಿಕೊಂಡು ಪರಿಶುದ್ಧ ಹಾಗೂ ಮಧುರ ಜಲವನ್ನು ಕೊಡುವ ಮೋಡದ ರೂಪವನ್ನು ತಾಳುವಂತೆ, ಕೆಂಡದಲ್ಲಿಟ್ಟ ಚಿನ್ನವು ತನ್ನಲ್ಲಿ ಮಿಶ್ರಣಗೊಂಡ ಎಲ್ಲಾ ಧಾತುಗಳನ್ನು ಕಳೆದುಕೊಂಡು ಚೊಕ್ಕ ಚಿನ್ನ ವಾಗುವಂತೆ ಶರೀರ, ವಾಣಿ ಮತ್ತು ಮನಸ್ಸುಗಳೆಂಬ ತ್ರಿಕರಣಗಳಿಂದುಂಟಾದ ದೋಷಗಳನ್ನು ಆ ತ್ರಿಕರಣಗಳಿಂದಲೇ ಕಳೆದುಕೊಳ್ಳುವುದು ತಪಸ್ಸು.
ಪತಂಜಲಿ ಮಹರ್ಷಿಗಳು ಅಷ್ಟಾಂಗ ಯೋಗದಲ್ಲಿ ಬರುವ ನಿಯಮದಲ್ಲಿ ತಪಸ್ಸಿನ ಪ್ರತಿಪಾದನೆಯನ್ನು ಮಾಡಿದ್ದಾರೆ. ‘ಶ್ರೀ ಸಿದ್ಧಾಂತ ಶಿಖಾಮಣಿ’ಯಲ್ಲಿ ‘ತಪೋ ಹಿ ಮೂಲಂ ಸರ್ವಾಸಾಂ ಸಿದ್ಧೀನಾಂ ಯಜ್ಜಗತ್ತ್ರಯೇ| ತಪಸ್ತತ್ ಕಾಯಮೂಲಂ ಹಿ ತಸ್ಮಾತ್ ಕಾಯಂ ನ ಸಂತ್ಯಜೇತ್ ||- ಅಂದರೆ ಎಲ್ಲ ಸಿದ್ದಿಗಳಿಗೆ ತಪಸ್ಸೇ ಮೂಲವಾದುದು, ಈ ತಪಸ್ಸು ಆಚರಿಸಲು ಶರೀರವೇ ಮುಖ್ಯ ಸಾಧನ. ಆದ್ದರಿಂದ ಶರೀರವನ್ನು ಸರಿಯಾಗಿಟ್ಟುಕೊಂಡು ತಪಸ್ಸನ್ನು ಆಚರಿಸಿ ಆರೋಗ್ಯ, ಸದ್ಗತಿ ಪಡೆಯಬಹುದು ಎಂದಿದೆ. ತಪಸ್ಸಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ದೇವರ ಪೂಜೆ, ಗುರುಸೇವೆ, ಜ್ಞಾನಿಗಳ ಅರ್ಚನೆ, ಶರೀರ ಶುದ್ಧಿ, ಸರಳವಾದ ವರ್ತನೆ ಇವು ಶಾರೀರಿಕ ತಪಸ್ಸುಗಳು.
ಸತ್ಯವಾಗಿ, ಪ್ರಿಯವಾಗಿ, ಹಿತವಾಗಿ ಮತ್ತು ಇನ್ನೊಬ್ಬರ ಮನಸ್ಸಿಗೆ ನೋವಾ ಗದ ಹಾಗೆ ಮಾತನಾಡುವುದು ಮತ್ತು ಧರ್ಮ ಗ್ರಂಥಗಳ ಸ್ವಾಧ್ಯಾಯವು ವಾಣಿಯ ತಪಸ್ಸು. ಮನಸ್ಸನ್ನು ಯಾವಾಗಲೂ ಪ್ರಸನ್ನವಾಗಿಟ್ಟುಕೊಳ್ಳುವುದು, ಮಾತ್ಸರ್ಯ ಭಾವನೆಯನ್ನು ತಾಳದೇ ಇರುವುದು. ಮೌನಾಚರಣೆ, ಸಂಯಮ ಮತ್ತು ಭಾವಶುದ್ದಿ ಇವು ಮಾನಸಿಕ ತಪಸ್ಸು. ಈ ತಪಸ್ಸನ್ನು ಅಹಂಕಾರಾದಿಗಳಿಲ್ಲದೆ, ಫಲಾಪೇಕ್ಷೆಯನ್ನೂ ಮಾಡದೇ ಆಚರಿಸಬೇಕು. ಅದುವೇ ಸಾತ್ವಿಕ ತಪಸ್ಸೆಂದು ಗೀತೆಯಲ್ಲಿಯೂ ಹೇಳಲಾಗಿದೆ. ಇಂತಹ ತಪಸ್ಸಿನಿಂದ ತ್ರಿಕರಣಗಳು ಸದಾ ಪರಿಶುದ್ಧರಾಗಿರುತ್ತವೆ. ರೋಗ ರುಜಿನಗಳಿಗೆ ಅವಕಾಶವಿರುವುದಿಲ್ಲ. ಅಂತೆಯೇ ಚರಕ ಮಹರ್ಷಿಗಳು ತಪಸ್ಸನ್ನು ಒಂದು ರಾಸಾಯನವನ್ನಾಗಿ ಹೇಳಿದ್ದಾರೆ.