ನೀತಿ ಆಯೋಗ ಮಾದರಿಯಲ್ಲಿ ರಾಜ್ಯ ಪರಿವರ್ತನಾ ಸಂಸ್ಥೆ; ಸಿಎಂ ಮಹತ್ವದ ನಿರ್ಧಾರ..

CMBommai
Published on

ಬೆಂಗಳೂರು: ನವ ಭಾರತಕ್ಕಾಗಿ ನವ ಕರ್ನಾಟಕ ಸಂಕಲ್ಪ ಪೂರ್ಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಪುನಾರಚಿಸುವ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಗೊಂಡಿದ್ದಾರೆ. ಕೇಂದ್ರ ಸರ್ಕಾರದ ನೀತಿ ಆಯೋಗ ಮಾದರಿಯಲ್ಲಿ ಆಯೋಗವನ್ನು ‘ರಾಜ್ಯ ಪರಿವರ್ತನಾ ಸಂಸ್ಥೆ’ (ಎಸ್​ಐಟಿಕೆ) ಎಂದು ಪುನಾರಚಿಸಲಾಗಿದೆ. ಈ ಸಂಸ್ಥೆಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ಯೋಜನೆ ಹಾಗೂ ಸಂಬಂಧಿತ ವಿಷಯಗಳಲ್ಲಿ ಪರಿಣಿತರಾದವರನ್ನು ಉಪಾಧ್ಯಕ್ಷರನ್ನಾಗಿ ಸರ್ಕಾರ ನೇಮಿಸಲಿದೆ. ನೀತಿ ಆಯೋಗ ಮಾದರಿಯಲ್ಲಿ ಸುಸ್ಥಿರ ಅಭಿವೃದ್ಧಿ-2030 ಹಾಗೂ 2047ಕ್ಕೆ ಭಾರತ ಗುರಿಗಳ ಮೇಲೆ ಈ ಸಂಸ್ಥೆ ಗಮನವಿರಿಸಲಿದೆ. ಪ್ರಮುಖ ಎರಡು ಗುರಿಗಳಿಗೆ ಹೊಂದಿಕೊಂಡು ರಾಜ್ಯದ ಯೋಜನೆಗಳನ್ನು ರೂಪಿಸುವುದು ಸಂಸ್ಥೆಯ ಜವಾಬ್ದಾರಿಯಾಗಿದೆ. ಗುರಿ ಸಾಧನೆಗೆ ಪೂರಕವಾಗಿ ಸಂಶೋಧನೆ ಮತ್ತು ವಿನೂತನ ಚಟುವಟಿಕೆ, ಯೋಜನೆ ಒಳಗೊಂಡಿರುವ ಸಹಕಾರಿ ಸ್ಥಳೀಯ ಆಡಳಿತ ಉತ್ತೇಜನ ಸೇರಿ ವಿವಿಧ ಹೊಣೆಗಾರಿಕೆ, ಕಾರ್ಯ ನಿರ್ವಹಿಸಲೆಂದು ಸಂಸ್ಥೆಯ ಸಾಂಸ್ಥಿಕ ಸ್ವರೂಪವನ್ನು ಮಾರ್ಪಡಿಸಲಾಗಿದೆ.

ಉದ್ದೇಶಗಳು: ಪ್ರಾದೇಶಿಕ ಅಸಮತೋಲನ ತಗ್ಗಿಸುವುದು, ಉತ್ತಮ ಆಡಳಿತ ಅಭ್ಯಾಸಗಳ ಅನುಷ್ಠಾನ, ಆವಿಷ್ಕಾರ ಹಾಗೂ ಜ್ಞಾನ ಉತ್ತೇಜಿಸುವುದು, ನವ ಭಾರತಕ್ಕಾಗಿ ನವ ಕರ್ನಾಟಕ ವಿಕಸನಗೊಳ್ಳಲು ರಾಜ್ಯದ ಆದ್ಯತೆಗಳಿಗೆ ಅನುಗುಣವಾಗಿ ರಾಜ್ಯದ ಯೋಜನೆಗಳು ಮತ್ತು ಆಯವ್ಯಯ ತಯಾರಿಸುವುದು. ದಕ್ಷ ಆಡಳಿತ, ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ, ಮೂಲಸೌಕರ್ಯ ಅಭಿವೃದ್ಧಿ, ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ಹೆಚ್ಚಿಸುವುದರೊಂದಿಗೆ ದೇಶದ ಬೆಳವಣಿಗೆಗೆ ರಾಜ್ಯದ ಕೊಡುಗೆ ಸುಧಾರಣೆ ಇನ್ನಿತರ ಉದ್ದೇಶಗಳನ್ನು ರಾಜ್ಯ ಪರಿವರ್ತನಾ ಸಂಸ್ಥೆ ಹೊಂದಿದೆ.

150 ಕೋಟಿ ರೂ. ಅನುದಾನ: ಪರಿವರ್ತನಾ ಸಂಸ್ಥೆಯನ್ನು ಪರಿಣಾಮಕಾರಿಯಾಗಿ ನಡೆಸಿ, ಯಶಸ್ವಿಯಾಗಿ ಗುರಿ ಸಾಧಿಸಲು ವಾರ್ಷಿಕ 150 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಅಲ್ಲದೆ, ಆಡಳಿತ ಸುಧಾರಣೆಗಳ ಸ್ಪರ್ಧಾತ್ಮಕ ನಿಧಿ, ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ, ಕರ್ನಾಟಕ ನಾವೀನ್ಯತೆ ಪ್ರಾಧಿಕಾರದ ನಾವೀನ್ಯತೆ ನಿಧಿ, ಸೆಂಟರ್ ಫಾರ್ ಓಪನ್ ಡಾಟಾ ರಿಸರ್ಚ್, ಸುಸ್ಥಿರ ಅಭಿವೃದ್ಧಿ ಗುರಿಗಳ ಸಮನ್ವಯ ಕೇಂದ್ರ ಇತ್ಯಾದಿಗಳಡಿ ಹಂಚಿಕೆಯಾದ ಅನುದಾನ ವಿಲೀನಗೊಳಿಸಲಾಗುವುದು ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಸಂಸ್ಥೆಯಲ್ಲಿ ಯಾರೆಲ್ಲ ಇರುತ್ತಾರೆ?

  • ಅಧ್ಯಕ್ಷ- ಮುಖ್ಯಮಂತ್ರಿ, ಉಪಾಧ್ಯಕ್ಷ- ಸರ್ಕಾರದಿಂದ ನೇಮಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ- ಯೋಜನಾ ಇಲಾಖೆ ಅಪರಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ
  • ವಿಶೇಷ ಆಹ್ವಾನಿತರು: ಯೋಜನೆ, ಹಣಕಾಸು, ಸಮಾಜ ಕಲ್ಯಾಣ, ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್, ನಗರಾಭಿವೃದ್ಧಿ ಹಾಗೂ ಐಟಿ-ಬಿಟಿ ಸಚಿವರು.
  • ಅಧಿಕಾರಿ ಸದಸ್ಯರು: ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತರು, ಹಣಕಾಸು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಸಮಾಜ ಕಲ್ಯಾಣ, ಆರೋಗ್ಯ, ಶಿಕ್ಷಣ, ನಗರಾಭಿವೃದ್ಧಿ, ಆರ್​ಡಿಪಿಆರ್ ಇಲಾಖೆಗಳ ಅಪರ ಮುಖ್ಯಕಾರ್ಯದರ್ಶಿ ಅಥವಾ ಕಾರ್ಯದರ್ಶಿ.
  • ಅಧಿಕಾರೇತರ ಸದಸ್ಯರು (ವಿಷಯ ತಜ್ಞರು): ಬಡತನ ನಿಮೂಲನೆ, ಆದಾಯ, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ, ಸೇವೆಗಳ ಸರಳೀಕರಣ, ಸ್ವಚ್ಛ ಮತ್ತು ಹಸಿರು ಇಂಧನ, ಸಂಪನ್ಮೂಲಗಳ ನಿರ್ವಹಣೆ, ಲಿಂಗ ಸಮಾನತೆ, ಕೈಗಾರಿಕೆ ಮತ್ತು ಮೂಲಸೌಕರ್ಯ ನಾವಿನ್ಯತೆ, ಕೌಶಲಾಭಿವೃದ್ಧಿ.
  • ಸಲಹಾ ಸಂಸ್ಥೆಗಳು: ಕರ್ನಾಟಕ ಇನ್ನೋವೇಟಿವ್ಸ್ ಪ್ರಾಧಿಕಾರ, ಹಣಕಾಸು ನೀತಿ ಸಂಸ್ಥೆ, ಪರಿಸರ ಮತ್ತು ನೀತಿ ಸಂಶೋಧನಾ ಸಂಸ್ಥೆ, ಆಡಳಿತ ತರಬೇತಿ ಸಂಸ್ಥೆ ಮೈಸೂರು, ಎಎನ್​ಎಸ್​ಐಆರ್​ಡಿ ಮೈಸೂರು, ಎಸ್​ಯುುಐಡಿ ಮೈಸೂರು, ಆಡಳಿತ ಸುಧಾರಣೆ-2, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಜ್ಞಾನ ಆಯೋಗ, ಭಾರತೀಯ ವಿಜ್ಞಾನ ಸಂಸ್ಥೆ, ಭಾರತೀಯ ನಿರ್ವಹಣಾ ಸಂಸ್ಥೆ, ರಾಷ್ಟ್ರೀಯ ಕಾನೂನು ಶಾಲೆ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ, ಇತರ ಪ್ರತಿಷ್ಠಿತ ಸಂಸ್ಥೆಗಳು, ಮಂಡಳಿಯಿಂದ ನೇಮಕವಾದವರು.
  • ಸಂಶೋಧನಾ ವಿಭಾಗ: ಕೃಷಿ, ಶಿಕ್ಷಣ, ಕೈಗಾರಿಕೆ, ಗ್ರಾಮೀಣ ಮತ್ತು ನಗರಾಭಿವೃದ್ಧಿ, ಆರ್ಥಿಕ ಮತ್ತು ಸಾಮಾಜಿಕ, ಆರೋಗ್ಯ ಮತ್ತು ಪೋಷಣೆ, ಶುದ್ಧ ಮತ್ತು ಹಸಿರು ಇಂಧನ, ವಿಜ್ಞಾನ ಮತ್ತು ಕೌಶಲಾಭಿವೃದ್ಧಿ ಮತ್ತು ಉದ್ಯೋಗ, ಆರ್ಥಿಕತೆ ಮತ್ತು ಹಣಕಾಸು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net