ಹೊಸ ವರ್ಷದ ಪಾರ್ಟಿಗೆ 2 ಮೇಕೆ ಕದ್ದ ಎಎಸ್​ಐ! ಮಾಲೀಕನ ಕಣ್ಣೀರಿಗೂ ಕರಗದೆ, ಬಾಡೂಟ ತಿಂದು ತೇಗಿದ್ರು

New Project (2)
Published on

ಬಲಂಗೀರ್: ಇದು ಬೇಲಿಯೇ ಎದ್ದು ಹೊಲ ಮೇಯ್ದ ಸ್ಟೋರಿ. ಇಲ್ಲೊಬ್ಬ ಪೊಲೀಸ್​ ಅಧಿಕಾರಿ ಹೊಸ ವರ್ಷದ ಪ್ರಯುಕ್ತ ಪಾರ್ಟಿ ಮಾಡಲು 2 ಮೇಕೆ ಕದ್ದು ಭರ್ಜರಿ ಬಾಡೂಟ ಮಾಡಿ ತಿಂದು ತೇಗಿದ್ದಾರೆ.

ಒಡಿಶಾದ ಬಲಂಗೀರ್ ಜಿಲ್ಲೆಯ ಸಿಂಧೆಕೆಲಾ ಪೊಲೀಸ್ ಠಾಣೆ ಎಎಸ್‌ಐ ಸುಮನ್ ಮಲ್ಲಿಕ್ ಮೇಕೆ ಕದ್ದ ಆರೋಪಿ. ಹೊಸ ವರ್ಷಕ್ಕೂ ಮುನ್ನಾ ದಿನ ಗ್ರಾಮದಲ್ಲಿ 2 ಮೇಕೆಗಳು ಕಳವಾಗಿದ್ದವು. ಮೇಕೆಗಳನ್ನು ಹುಡುಕಿಕೊಂಡ ಹೊರಟ ಮಾಲೀಕನಿಗೆ ಎಎಸ್​ಐ ಸುಮನ್ ಮಲ್ಲಿಕ್ ಬಳಿ ತನ್ನ ಮೇಕೆ ಇರುವುದು ಗೊತ್ತಾಗಿ, ವಾಪಸ್​ ಕೊಡುವಂತೆ ಕಣ್ಣೀರಿಟ್ಟು ಮನವಿ ಮಾಡಿದ್ದರು. ಇದಕ್ಕೆ ಕ್ಯಾರೆ ಎನ್ನದ ಎಎಸ್​ಐ, ಕದ್ದ ಮೇಕೆಗಳನ್ನು ಕೊಂದು ನ್ಯೂ ಇಯರ್​ ಪಾರ್ಟಿಗೆ ಬಾಡೂಟ ಮಾಡಿಸಿದ್ದಾರೆ.

ಮಾತಿಗೆ ಬಗ್ಗದ ಎಎಸ್​ಐ ವಿರುದ್ಧ ಮೇಕೆ ಮಾಲೀಕ ಗುರು ಪೊಲೀಸ್​ ಠಾಣೆಗೆ ಬಂದು ದೂರು ಕೊಟ್ಟಿದ್ದರು. ಆಗ ಕೆಲ ಸಿಬ್ಬಂದಿ ಪೊಲೀಸ್​ ವಾಹನದಲ್ಲಿ ಮೇಕೆ ಮಾಲೀಕನನ್ನು ಬೇರೆಡೆಗೆ ಕರೆದೊಯ್ದಿದ್ದು, ಕಂಗಾಲಾದ ಕುಟುಂಬಸ್ಥರು ಗ್ರಾಮಸ್ಥರೊಂದಿಗೆ ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದ್ದರು. ಮೇಕೆ ಮಾಲೀಕ ಗುರುನನ್ನು ಬಿಡುವಂತೆ ಹಾಗೂ 2 ಮೇಕೆಯ ಹಣ ಕೊಡುವಂತೆ ಆಗ್ರಹಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಬಲಂಗೀರ್ ಎಸ್ಪಿ ನಿತಿನ್ ಕುಸಲ್ಕರ್​, ಹೊಸ ವರ್ಷದ ದಿನವೇ ಎಎಸ್‌ಐ ಸುಮನ್ ಮಲ್ಲಿಕ್ ಅವರನ್ನು ಕೆಲಸದಿಂದ ಅಮಾನತು ಮಾಡಿ ಆದೇಶಿಸಿದ್ದಾರೆ. ತನ್ನ ಸಿಬ್ಬಂದಿ ಮೂಲಕ ಎಎಸ್​ಐ ಅವರೇ ಮೇಕೆಗಳನ್ನು ಕಳವು ಮಾಡಿಸಿದ್ದರು ಎಂದು ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net