

ವಿಜಯಪುರ: ಸಿಂದಗಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ದಿನೇದಿನೆ ಕುತೂಹಲ ಕೆರಳಿಸುತ್ತಿದ್ದು, ನಾಮಪತ್ರ ಸಲ್ಲಿಸಲು ಬಂದ ಕಾಂಗ್ರೆಸ್ ಅಭ್ಯರ್ಥಿಗೆ ಪುರಸಭೆಯ ಜೆಡಿಎಸ್ ಅಧ್ಯಕ್ಷ ಸಾಥ್ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಈ ನಡೆ ಖಂಡಿಸಿ ಅಧ್ಯಕ್ಷನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಿದ್ಧತೆ ನಡೆದಿದೆ.
ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಗುರುವಾರ ಸಾಂಕೇತಿಕವಾಗಿ ಗುರುವಾರ ಎರಡು ನಾಮಪತ್ರ ಸಲ್ಲಿಸಿದರು. ಈ ವೇಳೆ ಪುರಸಭೆ ಅಧ್ಯಕ್ಷ ಜೆಡಿಎಸ್‌ನ ಶಾಂತವೀರ ಮನಗೂಳಿ ಅವರು ಅಶೋಕ್ಗೆ ಸಾಥ್ ಕೊಟ್ಟರು. ಸಂಬಂಧದಲ್ಲಿ ಸಹೋದರನಾಗಿರುವ ಶಾಂತವೀರ ಅವರು ಪಕ್ಷವನ್ನು ಬದಿಗೊತ್ತಿ ಅಶೋಕನ ಜತೆ ಗುರುತಿಸಿಕೊಂಡಿದ್ದು ಚರ್ಚೆಗೆ ಕಾರಣವಾಯಿತು.
ಅವಿಶ್ವಾಸ ಗೊತ್ತುವಳಿ: ಪುರಸಭೆಯಲ್ಲಿ ಶಾಂತವೀರ ಮನಗೂಳಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಿದ್ಧತೆ ನಡೆದಿದೆ. ಈಗಾಗಲೇ ಸಭೆ ಕರೆಯುವಂತೆ ಸದಸ್ಯರು ಮನವಿ ಮಾಡಿದ್ದಾರೆ. ಸೆ.30ರಂದೇ ಪುರಸಭೆ ಮುಖ್ಯಾಧಿಕಾರಿಯನ್ನು ಭೇಟಿ ಮಾಡಿರುವ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರ ಕಾರ್ಯವೈಖರಿ ತೃಪ್ತಿಕರವಾಗಿಲ್ಲ. ಹೀಗಾಗಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಭೆ ಕರೆಯುವಂತೆ ಮನವಿ ಸಲ್ಲಿಸಿದ್ದಾರೆ. ಒಟ್ಟು 13 ಸದಸ್ಯರ ಸಹಿಯುಳ್ಳ ಪತ್ರವನ್ನ ಪುರಸಭೆ ಮುಖ್ಯಾಧಿಕಾರಿಗೆ ಸಲ್ಲಿಸಲಾಗಿದೆ.
ಅದರ ಬೆನ್ನಲ್ಲೇ ಶಾಂತವೀರ ಮನಗೂಳಿ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಶಾಂತವೀರ ಕಾಣಿಸಿಕೊಂಡಿದ್ದರು. ಇದೀಗ ಅಶೋಕ ಮನಗೂಳಿ ನಾಮಪತ್ರ ಸಲ್ಲಿಸುವ ಸಂದರ್ಭ ಅವರ ಜೊತೆಗೂಡಿ ಓಡಾಡುತ್ತಿರುವುದು ಕಂಡುಬಂತು. ಇದು ಜೆಡಿಎಸ್ ಕಾರ್ಯಕರ್ತರಲ್ಲಿ ಇರಿಸು ಮುರಿಸಿಗೆ ಕಾರಣವಾಯಿತು.