

ನಾಲತವಾಡ : ಸರಳವಾಗಿ ನುಡಿದ, ನುಡಿದಂತೆ ಸರಳವಾಗಿ ನಡೆದ ಸರಳ ಸಂತ ಎನಿಸಿಕೊಂಡ ಸಿದ್ಧೇಶ್ವರ ಸ್ವಾಮೀಜಿಯವರು ಸಾಕಷ್ಟು ಜನರ ಬದುಕಿನಲ್ಲಿ ಸ್ಪೂರ್ತಿ ತುಂಬಿದ್ದಾರೆ.
ನಡೆದಾಡುವ ದೇವರಾಗಿದ್ದ ಅವರು ನಮ್ಮನ್ನು ಅಗಲಿದ್ದರೂ ಅವರ ನೆನಪು ನಾಡಿನಲ್ಲೆಡೆ ಅಚ್ಚಳಿಯದೇ ಉಳಿದಿದೆ ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಹೇಳಿದರು.
ಮಹಾರಾಷ್ಟ್ರ ರಾಜ್ಯದ ಪುಣೆಯ ಪಿಂಪ್ರಿ ಚಿಂಚವಾಡದಲ್ಲಿ ಅಡವಿ ಸೋಮನಾಳದ ಉದ್ಯಮಿ ವಿಶ್ವನಾಥ ಸೇಲಾರ್, ವಿಜಯಪುರದ ಶಿವಲಿಂಗ ಢವಳೇಶ್ವರ ಹಾಗೂ ರಾಮ ನಾಯಿಕ ಬಸವ ಸೇವಾ ಸಂಘದಡಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವನಾಥ ಸೇಲಾರ್ ಮಾತನಾಡಿ, ತಮ್ಮ ನುಡಿ ಮುತ್ತುಗಳ ಪ್ರವಚನಗಳೊಂದಿಗೆ ಜ್ಞಾನದ ಯೋಗ ಹೇಳಿ ಕೊಟ್ಟ ಸ್ವಾಮೀಜಿಗಳು ಎಂದಿಗೂ ಕಾವಿ ತೊಡಲಿಲ್ಲ. ತೊಟ್ಟ ಬಿಳಿ ಬಟ್ಟೆಗೆ ಜೇಬು ಹೋಲಿಸಿಕೊಳ್ಳಲಿಲ್ಲ. ಎಂದಿಗೂ ಸರ್ಕಾರದ ಅನುದಾನ ಪಡೆಯಲಿಲ್ಲ. ನಾಡಿನ ಸಂತನನ್ನು ಕಳೆದುಕೊಂಡ ನಾವು ಅನಾಥವಾಗಿದ್ದೇವೆ ಎಂದರು.
ಜ. 1ಮತ್ತು 2ರಂದು ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಹಮ್ಮಿಕೊಂಡಿರುವ ಶ್ರೀಗಳ ಗುರುನಮನ ಮಹೋತ್ಸವಕ್ಕೆ ಹೊರ ನಾಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕು ಎಂದು ಮನವಿ ಮಾಡಿದರು.
ಡಿ.ವೈ. ಪಾಟೀಲ, ಡಾ. ಪಿ.ಡಿ. ಪಾಟೀಲ ಮಾತನಾಡಿದರು. ಕಕರಮರಿಯ ಆತ್ಮಾರಾಮ ಸ್ವಾಮೀಜಿ, ಅಥರ್ಗಾದ ಈಶಪ್ರಸಾದ ಸ್ವಾಮೀಜಿ, ಸದಲಗಾದ ಶ್ರದ್ಧಾನಂದ ಸ್ವಾಮೀಜಿ, ಮಿರಜ್‌ನ ಶಿವದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಹಿರಿಯರಾದ ಶಿವಲಿಂಗ ಢವಳೇಶ್ವರ, ಬಸವ ಸೇವಾ ಸಂಘದ ಅಧ್ಯಕ್ಷ ರಾಮ ನಾಯಿಕ, ಶಂಕರಗೌಡ ಹಾದಿಮನಿ ಇತರರಿದ್ದರು.