ಹೆಸರಿಗಷ್ಟೇ ನಿಶ್ಶಬ್ದ ವಲಯ

 ಶಾಲೆ-ಕಾಲೇಜು, ಆಸ್ಪತ್ರೆ ಮತ್ತು ಕೋರ್ಟ್‌ಗಳ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯನ್ನು ನಿಶ್ಶಬ್ದ ವಲಯ’ (ನೋ ಸೌಂಡ್ ಜೋನ್) ಎಂದು ಕಾನೂನು ಪ್ರಕಾರ ಘೋಷಿಸಲಾಗಿದ್ದರೂ, ಮಂಗಳೂರು ನಗರದಲ್ಲಿ ಮಾತ್ರ ಈ ನಿಯಮ ಸಂಪೂರ್ಣವಾಗಿ ಉಲ್ಲಂಘನೆಯಾಗುತ್ತಿದೆ.
ಶಾಲೆ-ಕಾಲೇಜು, ಆಸ್ಪತ್ರೆ ಮತ್ತು ಕೋರ್ಟ್‌ಗಳ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯನ್ನು ನಿಶ್ಶಬ್ದ ವಲಯ’ (ನೋ ಸೌಂಡ್ ಜೋನ್) ಎಂದು ಕಾನೂನು ಪ್ರಕಾರ ಘೋಷಿಸಲಾಗಿದ್ದರೂ, ಮಂಗಳೂರು ನಗರದಲ್ಲಿ ಮಾತ್ರ ಈ ನಿಯಮ ಸಂಪೂರ್ಣವಾಗಿ ಉಲ್ಲಂಘನೆಯಾಗುತ್ತಿದೆ.
Published on
ಮಂಗಳೂರು: ಶಾಲೆ-ಕಾಲೇಜು, ಆಸ್ಪತ್ರೆ ಮತ್ತು ಕೋರ್ಟ್‌ಗಳ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯನ್ನು ನಿಶ್ಶಬ್ದ ವಲಯ’ (ನೋ ಸೌಂಡ್ ಜೋನ್) ಎಂದು ಕಾನೂನು ಪ್ರಕಾರ ಘೋಷಿಸಲಾಗಿದ್ದರೂ, ಮಂಗಳೂರು ನಗರದಲ್ಲಿ ಮಾತ್ರ ಈ ನಿಯಮ ಸಂಪೂರ್ಣವಾಗಿ ಉಲ್ಲಂಘನೆಯಾಗುತ್ತಿದೆ. ಮಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಖಾಸಗಿ ಬಸ್‌ಗಳ ಪ್ರೆಶರ್ ಹಾಗೂ ಏರ್ ಹಾರ್ನ್‌ಗಳ ಅಬ್ಬರ ಸಾರ್ವಜನಿಕರು, ಪಾದಚಾರಿಗಳು ಮತ್ತು ರೋಗಿಗಳ ನೆಮ್ಮದಿ ಕೆಡಿಸಿದೆ.
ಬೆಳಗ್ಗಿನಿಂದ ರಾತ್ರಿಯವರೆಗೂ ಕೇಳಿಬರುವ ಈ ಶಬ್ದ ಮಾಲಿನ್ಯದಿಂದಾಗಿ ಕರಾವಳಿ ನಗರಿ ಸದ್ಯ ಕಿವಿಗಡಚಿಕ್ಕುವ ಸೌಂಡ್ ಜೋನ್ ಆಗಿ ಮಾರ್ಪಟ್ಟಿದೆ. ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಕಿರಿಕಿರಿಯ ನಡುವೆ, ಖಾಸಗಿ ಬಸ್ ಚಾಲಕರು ರಸ್ತೆಯಲ್ಲಿ ದಾರಿ ಮಾಡಿಕೊಳ್ಳಲು ಮತ್ತು ಪ್ರಯಾಣಿಕರನ್ನು ಆಕರ್ಷಿಸಲು ಉದ್ದೇಶಪೂರ್ವಕವಾಗಿ ಭಾರೀ ಶಬ್ದದ ಹಾರ್ನ್‌ಗಳನ್ನು ಬಳಸುತ್ತಿದ್ದಾರೆ. ಪೊಲೀಸರು ಇದ್ದಾಗ ಒಂದು ರೀತಿಯ ಸೌಮ್ಯ ಹಾರ್ನ್, ಅವರು ಇಲ್ಲದಿದ್ದಾಗ ನಿಷೇಧಿತ ಮಲ್ಟಿಟೋನ್ ಹಾರ್ನ್‌ಗಳನ್ನು ಬಾರಿಸುವುದು ಚಾಲಕರ ದಿನನಿತ್ಯದ ಪರಿಪಾಠವಾಗಿದೆ. ಈ ಹಿಂದೆ ಸಾರಿಗೆ ಇಲಾಖೆ ದಂಡ ವಿಧಿಸಿದ್ದರೂ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡ ಬಂದಿಲ್ಲ.
*ರೋಗಿಗಳಿಗೆ ಹೆಚ್ಚಿದ ಆರೋಗ್ಯ ಸಂಕಷ್ಟ
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿ ಶಬ್ದ ನಿಯಂತ್ರಣ ಅತ್ಯಗತ್ಯ. ಆದರೆ ಮಂಗಳೂರಿನಲ್ಲಿ ಹಗಲಿಡೀ ಕೇಳುವ ಈ ಕರ್ಕಶ ಶಬ್ದದಿಂದಾಗಿ ರಸ್ತೆ ಬದಿಯ ವ್ಯಾಪಾರಿಗಳು, ವೃದ್ಧರು ಹಾಗೂ ರೋಗಿಗಳು ತೀವ್ರ ಮಾನಸಿಕ ಒತ್ತಡ ಎದುರಿಸುತ್ತಿದ್ದಾರೆ. ನಿರಂತರ ಶಬ್ದ ಮಾಲಿನ್ಯವು ಸಾರ್ವಜನಿಕರಲ್ಲಿ ರಕ್ತದೊತ್ತಡ ಮತ್ತು ಶ್ರವಣ ದೋಷದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ನಿಯಮದ ಪ್ರಕಾರ ಸೂಕ್ಷ್ಮ ವಲಯಗಳಲ್ಲಿ ಶಬ್ದದ ಪ್ರಮಾಣ 50 ಡೆಸಿಬಲ್‌ಗಿಂತ ಹೆಚ್ಚಿರಬಾರದು. ನಿಶ್ಶಬ್ದ ವಲಯದಲ್ಲಿ ನಿಯಮ ಉಲ್ಲಂಘಿಸಿದರೆ 1,000 ರೂ. ದಂಡ ಹಾಗೂ 3 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
------------------
ಮಂಗಳೂರಿನಲ್ಲಿಲ್ಲ ‘ಶಬ್ದ ಮಾಪಕ’ ಉಪಕರಣ!
ರಾಜ್ಯಾದ್ಯಂತ ಶಬ್ದ ಮಾಲಿನ್ಯ ಪತ್ತೆ ಹಚ್ಚಲು ಮಾಲಿನ್ಯ ನಿಯಂತ್ರಣ ಮಂಡಳಿಯು ಪೊಲೀಸ್ ಇಲಾಖೆಗೆ ಉಪಕರಣಗಳನ್ನು ನೀಡಿದ್ದು, ಒಟ್ಟು 341 ಕಡೆಗಳಲ್ಲಿ ಮಾಪಕಗಳನ್ನು ಅಳವಡಿಸಲಾಗಿದೆ. ಆದರೆ, ದುರದೃಷ್ಟವಶಾತ್ ಮಂಗಳೂರಿನ ಯಾವುದೇ ನೋ ಸೌಂಡ್ ಜೋನ್‌ಗಳಲ್ಲಿ ಈವರೆಗೆ ಇಂತಹ ತಾಂತ್ರಿಕ ಮಾಪಕಗಳನ್ನು ಅಳವಡಿಸಿಲ್ಲ!
-------------------
67 ಸೂಕ್ಷ್ಮ ಪ್ರದೇಶ ಗುರುತು
ಮೂರು ವರ್ಷಗಳ ಹಿಂದೆಯೇ ಮಂಗಳೂರು ನಗರದ ವೆನ್ಲಾಕ್, ಕೆಎಂಸಿ, ಕೋರ್ಟ್ ರೋಡ್, ಲೇಡಿಹಿಲ್, ಬಲ್ಮಠ ಸೇರಿದಂತೆ ಒಟ್ಟು 67 ಸೂಕ್ಷ್ಮ ಪ್ರದೇಶಗಳನ್ನು ನಿಶ್ಶಬ್ದ ವಲಯಗಳೆಂದು ಗುರುತಿಸಲಾಗಿದ್ದರೂ, ಇವುಗಳ ದಯನೀಯ ಸ್ಥಿತಿ ಇಂದಿಗೂ ಬದಲಾಗಿಲ್ಲ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಡಳಿತ ಮತ್ತು ಸಂಚಾರಿ ಪೊಲೀಸರಿಗೆ ಮನವಿ ನೀಡಿದ್ದರೂ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿಲ್ಲ.
-------------
ಕರ್ಕಶ ಹಾರ್ನ್ ಬಳಕೆ ತಡೆಯುವ ನಿಟ್ಟಿನಲ್ಲಿ ಕಾರ್ಯಾಚರಣೆಗಳನ್ನು ನಡೆಸಲು ಈಗಾಗಲೇ ಸಂಚಾರ ವಿಭಾಗದವರಿಗೆ ಸೂಚನೆ ನೀಡಲಾಗಿದೆ. ಚಾಲಕರಿಗೆ ದಂಡ ವಿಧಿಸಿ, ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ. ಬಸ್ಸುಗಳ ಮಾಲಕರೂ ಗಮನ ಹರಿಸಿ, ಬಸ್ಸುಗಳಲ್ಲಿ ಅನುಮತಿ ಇಲ್ಲದ ಹಾರ್ನ್ ಇದ್ದರೆ ತೆಗೆಸಬೇಕು.
- ಸುಧೀರ್ ಕುಮಾರ್ ರೆಡ್ಡಿ, ಮಂಗಳೂರು ಪೊಲೀಸ್ ಕಮಿನಷರ್
---------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net