ಕೆಜಿಎಫ್-2 ಸಿನಿಮಾ ನೋಡುವಾಗ ಥಿಯೇಟರ್​ನಲ್ಲೇ ಗುಂಡಿನ ದಾಳಿ: ಯುವಕನ ಸ್ಥಿತಿ ಗಂಭೀರ, ಟಾಕೀಸ್ ಬಂದ್​

kgf
Published on

ಹಾವೇರಿ: ಕೆಜಿಎಪ್-2 ಸಿನಿಮಾ ನೋಡುವಾಗ ಕ್ಷುಲ್ಲಕ ಕಾರಣಕ್ಕೆ ಥಿಯೇಟರ್​ನಲ್ಲೇ ಗುಂಡಿನ ದಾಳಿ ನಡೆದಿದ್ದು, ಯುವಕನೊಬ್ಬನ ಸ್ಥಿತಿ ಗಂಭೀರವಾಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದ ರಾಜಶ್ರೀ ಟಾಕೀಸ್​ನಲ್ಲಿ ಮಂಗಳವಾರ ರಾತ್ರಿ 10-30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಸಿನಿಮಾ ನೋಡಲು ಬಂದಿದ್ದ ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ. ಬುಧವಾರ ಬೆಳಗ್ಗೆ ಬೆಂಗಳೂರಿನಿಂದ ಬೆರಳುಚ್ಚು ತಜ್ಞರು, ಶ್ವಾನ ದಳ ಹಾಗೂ ಪರೀಶೀಲನೆ ತಂಡ ಆಗಮಿಸಲಿದ್ದು, ಪಂಚನಾಮೆ ಆಗುವವರೆಗೂ ಥಿಯೇಟರ್ ಬಂದ್ ಮಾಡಲಾಗಿದೆ.

ಈ ಕುರಿತು ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹನುಮಂತರಾಯ್, ಶಿಗ್ಗಾಂವ ಪಟ್ಟಣದ ರಾಜಶ್ರೀ ಟಾಕೀಸಿನಲ್ಲಿ ಮಂಗಳವಾರ ರಾತ್ರಿ ಶೋ ಕೆಜಿಎಪ್-2 ಸಿನಿಮಾ ಪ್ರಾರಂಭವಾದ ವೇಳೆ ಗುಂಡಿನ ದಾಳಿಯಾಗಿದೆ.. ಸಿನಿಮಾ ನೋಡುವಾಗ ಸೀಟ್ ಮೇಲೆ ಕಾಲು ಹಾಕಿಕೊಂಡು ಕುಳಿತಾಗ ಯುವಕರಿಬ್ಬರ ನಡುವೆ ಗಲಾಟೆ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಮಾತಿಗೆ ಮಾತು ಬೆಳೆದು ಪಕ್ಕದಲ್ಲಿದ್ದ ವ್ಯಕ್ತಿಯು ತನ್ನ ರಿವಾಲ್ವಾರ್​ನಿಂದ ಶಿಗ್ಗಾಂವ ತಾಲೂಕಿನ ಮುಗಳಿ ಗ್ರಾಮದ ವಸಂತಕುಮಾರ್ ಶಿವಪೂರ(28) ಎಂಬಾತನ ಮೇಲೆ 3 ಸುತ್ತಿನ ಗುಂಡು ಹಾರಿ ಪರಾರಿಯಾಗಿದ್ದಾನೆ. ವಸಂತಕುಮಾರ್​ನ ಹೊಟ್ಟೆಗೆ ಗುಂಡು ಹೊಕ್ಕಿದ್ದು, ತಕ್ಷಣ ಸಾರ್ವಜನಿಕರು ಆಸ್ಪತ್ರೆಗೆ ರವಾನಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಿಸಲಾಗಿದೆ ಎಂದರು.

ಗುಂಡಿನ ದಾಳಿ ನಡೆದ ಸ್ಥಳದಲ್ಲಿದ್ದ 2 ಖಾಲಿ ಕೋಕಾಗಳನ್ನು ಜಪ್ತಿ ಮಾಡಲಾಗಿದೆ. ಗಾಯಾಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಈಗ ಕೇಸ್ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಎರಡು ತಂಡ ರಚನೆ ಮಾಡಿದ್ದೇವೆ. ಆದಷ್ಟು ಬೇಗ ಆರೋಪಿಯನ್ನು ಪತ್ತೆ ಮಾಡ್ತೀವಿ. ಸದ್ಯ ಟಾಕೀಸ್ ಅನ್ನು ಸೀಜ್ ಮಾಡಿದ್ದೇವೆ ಎಸ್ಪಿ ಹನುಮಂತರಾಯ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net