

ಪೀಟರ್ಸ್ಬರ್ಗ್: ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಎನ್ನುತ್ತಾರೆ. ಆದರೆ ಇಲ್ಲೊಂದು ಜೋಡಿ ಬೆಳಿಗ್ಗೆಯೇ ಜಗಳ ಆರಂಭಿಸಿದ್ದು ಅವರ ಕಥೆ ಏನಾಯಿತು ಎಂಬುದನ್ನು ನೀವೇ ನೋಡಿ..
ರಷ್ಯಾದ ಪೀಟರ್ಸ್ಬರ್ಗ್ನಲ್ಲಿ ಓಲ್ಗಾ ವೋಲ್ಕೊವಾ ಮತ್ತು ಯೆವ್ಗೆನಿ ಕಾರ್ಲಗಿನ್ ವಾಸಿಸುತ್ತಿದ್ದಾರೆ. ಒಬ್ಬ ಮಗನೂ ಇರುವ ಈ ಜೋಡಿ ಶನಿವಾರ ಬೆಳಗ್ಗೆಯೇ ಜಗಳ ಆರಂಭಿಸಿದೆ. ಜಗಳ ತಾರಕಕ್ಕೇರಿದ್ದು, ಇಬ್ಬರು ಮನೆಯ ಬಾಲ್ಕನಿಗೆ ಬಂದು ಕಿತ್ತಾಡಿಕೊಳ್ಳಲಾರಂಭಿಸಿದ್ದಾರೆ. ಕಿತ್ತಾಟದ ಫೋರ್ಸ್ಗೆ ಬಾಲ್ಕನಿಯ ಅಡ್ಡಪಟ್ಟಿ ಮುರಿದಿದ್ದು, ಇಬ್ಬರೂ ಒಟ್ಟಿಗೆ ಸುಮಾರು 25 ಅಡಿ ಕೆಳಗೆ ಬಿದ್ದಿದ್ದಾರೆ.
ಮನೆಯ ಬಾಲ್ಕನಿಯಿಂದ ಸೀದಾ ಫುಟ್ಪಾತ್ಗೆ ದಂಪತಿ ಬಿದ್ದಿದ್ದಾರೆ. ಈ ದೃಶ್ಯವನ್ನು ದಾರಿಹೋಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇಬ್ಬರ ಪ್ರಾಣಕ್ಕೆ ಏನೂ ಹಾನಿಯುಂಟಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್)