

ನವದೆಹಲಿ: ಬಾಹ್ಯಾಕಾಶದಲ್ಲಿ ಅಲಸಂದೆ ಬೀಜ ಮೊಳಕೆಯೊಡೆಯುವಂತೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವದ ಸಾಧನೆ ಮಾಡಿದ್ದು, ಹೊಸ ವರ್ಷಾರಂಭದಲ್ಲೇ ಈ ಸಿಹಿ ಸುದ್ದಿ ನೀಡಿದೆ. ಅಲಸಂದೆ ಬೀಜ ಮೊಳಕೆ ಯೊಡೆಯುವಂತೆ ಮಾಡಿದ ಸಾಧನೆಯ ಈ ಪ್ರಯೋಗ, ಕಡಿಮೆ ಗುರುತ್ವದಲ್ಲಿ ಸಸ್ಯಗಳನ್ನು ಬೆಳೆಸುವುದನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ನೆರವಾಗಲಿದೆ. ಅದು ಸುದೀರ್ಘ ಬಾಹ್ಯಾಕಾಶ ಮಿಷನ್ಗಳಲ್ಲಿ ಬಹಳಷ್ಟು ಸಹಾಯಕವಾಗಲಿದೆ. ಮೊಳಕೆಯೊಡೆದ ಅಲಸಂದೆ ಬೀಜದಿಂದ ಶೀಘ್ರವೇ ಎಲೆಯೂ ಬೆಳೆಯಲಿದೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ನಲ್ಲಿ ಇಸ್ರೋ ಈ ಮಹತ್ವದ ಬಾಹ್ಯಾಕಾಶ ಸಾಧನೆಯನ್ನು ಹಂಚಿಕೊಂಡಿದೆ. ‘ಬಾಹ್ಯಾಕಾಶದಲ್ಲಿ ಜೀವ ಆರಂಭವಾಗಿದೆ! ವಿಎಸ್ಎಸ್ಸಿಯ ಸಿಆರ್ಒಪಿಎಸ್ (ಕಾಂಪ್ಯಾಕ್ಟ್ ರೀಸರ್ಚ್ ಮಾಡ್ಯೂಲ್ ಫಾರ್ ಆರ್ಬಿಟಲ್ ಪ್ಲಾಂಟ್ ಸ್ಟಡೀಸ್-ಕ್ರಾಪ್ಸ್) ಪ್ರಯೋಗವನ್ನು ಪಿಎಸ್ಎಲ್ವಿ-ಸಿ60 ಪೋಯಮ್4ನಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಅಲಸಂದೆ ಬೀಜ ನಾಲ್ಕೇ ದಿನದಲ್ಲಿ ಮೊಳಕೆಯೊಡೆದಿದ್ದು ಶೀಘ್ರವೇ ಎಲೆಯೂ ಬರಬಹುದೆಂಬ ನಿರೀಕ್ಷೆಯಿದೆ’ ಎಂದು ಇಸ್ರೋ ವಿವರಿಸಿದೆ.
ಪಿಎಸ್ಎಲ್ವಿ-ಸಿ60 ರಾಕೆಟ್ನೊಂದಿಗೆ ಸ್ಪೇಡ್ ಎಕ್ಸ್ ಮಿಷನ್ನಲ್ಲಿ 2024 ಡಿಸೆಂಬರ್ 30ರಂದು ಈ ಅಲಸಂದೆ ಬೀಜಗಳನ್ನು ಬಾಹ್ಯಾಕಾಶಕ್ಕೆ ಕಳಿಸಲಾಗಿತ್ತು ಎಂದು ಇಸ್ರೋ ತಿಳಿಸಿದೆ.
ಸಕ್ರಿಯ ಉಷ್ಣ (ಥರ್ಮಲ್) ನಿಯಂತ್ರಣದಲ್ಲಿ ನಿಯಂತ್ರಿತ ವಾತಾವರಣದಲ್ಲಿ 8 ಅಲಸಂದೆ ಬೀಜ ಹಾಕಲಾಗಿತ್ತು. ಇದು ಭಾರತದ ಬಾಹ್ಯಾಕಾಶ ಜೀವಶಾಸ್ತ್ರ ಸಂಶೋಧನೆಯಲ್ಲಿ ಮೈಲಿಗಲ್ಲಾಗಿದೆ. ಭಾರತದ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುತ್ತದೆ.
ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಅಭಿವೃದ್ಧಿಪಡಿಸಿದ ‘ಕ್ರಾಪ್ಸ್’, ಸೂಕ್ಷ್ಮ ಗುರುತ್ವದಲ್ಲಿ ಸಸ್ಯಗಳ ಬೆಳವಣಿಗೆಯ ಅಧ್ಯಯನವನ್ನು ಮುಂದಕ್ಕೊಯ್ಯುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಪಿಎಸ್ಎಲ್ವಿ-ಸಿ60 ಮಿಷನ್ನ ಪೋಯಮ್4 ವೇದಿಕೆಯಲ್ಲಿ ಈ ಪ್ರಯೋಗ ನಡೆಸಲಾಗಿತ್ತು. ಬಾಹ್ಯಾಕಾಶದಲ್ಲಿ ಸಸ್ಯಗಳು ಹೇಗೆ ಬೆಳೆಯುತ್ತವೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಕ್ರಾಪ್ಸ್ ಗುರಿಯಾಗಿದೆ. ಭವಿಷ್ಯದ ಸುದೀರ್ಘ-ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಸಸ್ಯಗಳನ್ನು ಬೆಳೆಸುವಲ್ಲಿ ಮಹತ್ವದ್ದಾಗಲಿದೆ.