

ಚಿಕ್ಕಮಗಳೂರು: ನನ್ನ ಗಾಡಿ ಮುಟ್ಟಬೇಡಿ, ನಾನೇ ಬೆಂಕಿ ಹಚ್ಚುತ್ತೇನೆ ಎನ್ನುತ್ತಾ ನಗರಸಭೆ ಅಧಿಕಾರಿಗಳ ಎದುರೇ ವ್ಯಾಪಾರಿಯೊಬ್ಬ ತನ್ನ ತಳ್ಳುಗಾಡಿಗೆ ಬೆಂಕಿ ಹಚ್ಚಿದ ಘಟನೆ ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ ನಡೆದಿದೆ.
ರಸ್ತೆಬದಿ ವ್ಯಾಪಾರಿಗಳಿಗೆ ನಗರಸಭೆ ಸಿಬ್ಬಂದಿ ನಿತ್ಯ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ರಸ್ತೆಬದಿ ತರಕಾರಿ, ಹಣ್ಣು ಮಾರಾಟ ಮಾಡುತ್ತಾ 200-300 ರೂ. ಸಂಪಾದಿಸುತ್ತಿದ್ದ ವ್ಯಾಪಾರಿಗೆ, ರಸ್ತೆಬದಿ ವ್ಯಾಪಾರ ಮಾಡದಂತೆ ನಗರಸಭೆ ಸಿಬ್ಬಂದಿ ಹಲವು ಬಾರಿ ತಾಕೀತು ಮಾಡಿದ್ದರಂತೆ. ಆದರೂ ರಸ್ತೆಬದಿ ವ್ಯಾಪಾರ ಮುಂದುವರಿದಿತ್ತು. ಹಾಗಾಗಿ ಗಾಡಿಯನ್ನ ವಶಕ್ಕೆ ಪಡೆಯಲು ಬಂದ ನಗರಸಭೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ ವ್ಯಾಪಾರಿ, ನಮ್ಮ ಹೊಟ್ಟೆ ಮೇಲೆ ಹೋಡೀತ್ತೀದ್ದೀರಾ... ನಾನೇ ನನ್ನ ಗಾಡಿಗೆ ಬೆಂಕಿ ಹಾಕ್ತೀನಿ... ಎನ್ನುತ್ತಾ ತನ್ನ ಗಾಡಿಗೆ ತಾನೇ ಬೆಂಕಿ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.
ರಸ್ತೆಬದಿ ವ್ಯಾಪಾರ ಮಾಡ್ತೀವಿ ಅಂತ ಅದನ್ನೇ ಬಂಡವಾಳ ಮಾಡಿಕೊಂಡ ನಗರಸಭೆಯ ಕೆಲ ಸಿಬ್ಬಂದಿ 500-1000 ರೂಪಾಯಿ ಲಂಚ ಕೇಳ್ತಾರೆ. ಎಲ್ಲಿಂದ ತಂದು ಕೊಡ್ಲಿ? ಫೈನಾನ್ಸ್ಗೆ ಕಟ್ಟೋದೆ ಕಷ್ಟ, ಇವರಿಗೆ ಹೇಗೆ ಕೊಡೋದು? ಎಂದು ಆಕ್ರೋಶ ಹೊರಹಾಕಿದ್ದಾರೆ.