ಹಾವಿನ ಮೊಟ್ಟೆ ಒಡೆಯಲು 54 ದಿನ ಹೆದ್ದಾರಿ ಕಾಮಗಾರಿ ಸ್ಥಗಿತ!

New Project(14)
Published on

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯನ್ನು 54 ದಿನ ಸ್ಥಗಿತಗೊಳಿಸಲಾಗಿತ್ತು. ಕಾರಣ ಹಾವಿನ ಮೊಟ್ಟೆ ಒಡೆಯುವ ತನಕ ಕಾಯುತ್ತಿದ್ದದ್ದು!

ರಸ್ತೆ ಕಾಮಗಾರಿ ಹೊಣೆ ಹೊತ್ತಿರುವ ಉರಾಳುಂಗಲ್​ ಸೊಸೈಟಿಯು ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ 54 ದಿನಗಳ ಕಾಲ ಕಾಮಗಾರಿಯನ್ನು ತಡೆಹಿಡಿದಿತ್ತು. ಸೋಮವಾರ 24 ಮೊಟ್ಟೆಗಳು ಒಡೆದಿವೆ. ಹದಿನೈದು ಹಾವಿನ ಮರಿಗಳನ್ನು ಕಾಡಿಗೆ ಸಾಗಿಸಲಾಗಿದೆ. ಉಳಿದ ಒಂಬತ್ತು ಮರಿಗಳನ್ನು ಶೀಘ್ರದಲ್ಲೇ ಅರಣ್ಯಕ್ಕೆ ಬಿಡಲಾಗುವುದು ಎಂದು ಉರಗ ತಜ್ಞ ಅಮೀನ್​ ತಿಳಿಸಿದ್ದಾರೆ. ಅಂದಹಾಗೆ ರಸ್ತೆ ಕಾಮಗಾರಿ ತಡೆಗೂ-ಹಾವಿನ ಮೊಟ್ಟೆಗೂ ಏನು ಸಂಬಂಧ ಗೊತ್ತಾ?

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುವ ವೇಳೆ ಹಾವೊಂದು ಕಂಡು ಬಂತು. ಆ ಹಾವನ್ನು ಸ್ಥಳಾಂತರಿಸಲು ಯತ್ನಿಸುತ್ತಿರುವಾಗ ಅದು ಮೊಟ್ಟೆಗಳಿಗೆ ಕಾವು ನೀಡುತ್ತಿರುವ ಅಂಶ ಗಮನಕ್ಕೆ ಬಂತು. ನಂತರ ವನ್ಯಜಿವಿ ಇಲಾಖೆ ಸಂಶೋಧನಾ ಮುಖ್ಯಸ್ಥ ಮವೀಶ್​ ಕುಮಾರ್​, ಈ ಸಂದರ್ಭ ಹಾವಿನ ಸ್ಥಳಾಂತರ ಸರಿಯಲ್ಲ ಎಂದು ಸಲಹೆ ನೀಡಿದರು. ಮೊಟ್ಟೆ ಒಡೆಯಲು 27 ಸೆಂ.ನಿಂದ 31 ಸೆಂ.ತಾಪಮಾನ ಬೇಕು. ತಾಯಿ ಹಾವಿನ ಕಾವು ಮೊಟ್ಟೆಗಳಿಗೆ ಸಿಗಬೇಕು. ಮೊಟ್ಟೆ ಒಡೆದು ಮರಿಗಳು ಹೊರಬರಲು 54 ದಿನ ಬೇಕು. ಬಳಿಕ ಹಾವನ್ನು ಸ್ಥಳಾಂತರಿಸಬಹುದು ಎಂದು ತಿಳಿಸಿದ್ದರು. ಅದರಂತೆ 54 ದಿನಗಳ ಕಾಲ ಕಾಯಲಾಗಿತ್ತು. ಹಾವಿನ ಮರಿಗಳು ಮೊಟ್ಟೆಯಿಂದ ಹೊರ ಬಂದಿವೆ. ಸೋಮವಾರ ಹೆದ್ದಾರಿ ಕಾಮಗಾರಿ ಪುನರಾರಂಭಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net