ಆತ್ಮಪ್ರಭೆಗೆ ಜೀವನಾನುಭವ ಸೇರಿದಾಗ ಜ್ಞಾನದ ಪ್ರತಿಫಲನ

Brain Mind
Published on
ಗಣನೆಗೆಟುಕದ ಗುಣಗಳಾತ್ಮದವರ್ವ್ಯಣಗಳು|

ಮನದ ದೇಹದ ಜೀವದೆಲ್ಲ ಕರಣಗಳಾ|

ಅನುಭವದ ಮುಕುರದೊಳ್ ಪ್ರತಿಫಲಿಸೆ ತನ್ನದೊಂ-|

ದಣುವದುವೆ ಸುಂದರವೊ-ಮಂಕುತಿಮ್ಮ||467||

ಆತ್ಮದ ಗುಣಗಳನ್ನು ಎಣಿಸುವುದಕ್ಕಾಗಲಿ, ವರ್ಣಿಸುವುದಕ್ಕಾಗಲಿ ಸಾಧ್ಯವಿಲ್ಲ. ಮನಸ್ಸು, ದೇಹ, ಇಂದ್ರಿಯಗಳ ಮೂಲಕ ಪಡೆದ ಅನುಭವವೆಂಬ ಕನ್ನಡಿಯಲ್ಲಿ ಅದು ಪ್ರತಿಫಲಿಸುತ್ತದೆ. ಇದು ಪುಟ್ಟ ಕಣದಷ್ಟಾಗಿದ್ದರೂ ಬಹಳ ಸುಂದರ ಎನ್ನುತ್ತದೆ ಈ ಕಗ್ಗ.

ಹಲವು ಬೇರೆಬೇರೆ ಅಂಶಗಳು ಕೂಡಿ ಮನುಷ್ಯ. ಲೋಕಾನುಭವವನ್ನು ಪಡೆಯುವುದಕ್ಕಾಗಿ ಕಣ್ಣು, ಕಿವಿ, ಮೂಗು ಮೊದಲಾದ ಜ್ಞಾನೆಂದ್ರಿಯಗಳು, ಕೆಲಸ ಕಾರ್ಯಗಳಿಗಾಗಿ ಕೈಕಾಲು ಮೊದಲಾದ ಕಮೇಂದ್ರಿಯಗಳು, ಮತಿಮನಸ್ಸುಗಳು ಜೊತೆಗೆ ಪೂರ್ವಾರ್ಜಿತ ಕರ್ಮದೋಷಗಳು, ಋಣದ ಶೇಷಗಳು, ಪೂರ್ವ ಜನುಮದ ವಾಸನೆ, ಪುಣ್ಯ-ಪಾಪ ಮುಂತಾದ ಹಲವು ಅಂಶಗಳು ಒಟ್ಟುಗೂಡಿ ಮನುಷ್ಯನಾಗುತ್ತಾನೆ. ಹೀಗೆ ಬಹು ಅಂಶಗಳಿಂದ ಕೂಡಿದ ಮನುಷ್ಯನ ಮೇಲೆ ಪ್ರಕೃತಿಯೂ ಪ್ರಭಾವವನ್ನು ಬೀರುತ್ತದೆ. ಕ್ಷಣಕ್ಷಣಕ್ಕೂ ಏರುಪೇರಾಗುವ ಸತ್ತ್ವ, ರಜೋ, ತಮೋ ಗುಣಗಳು, ಇವುಗಳನ್ನು ಪ್ರಚೋದಿಸುವ ಕಾಮಕ್ರೋಧಾದಿ ಆರುಬಗೆಯ ಹಗೆಗಳು ಹೀಗೆ ವಿಶೇಷ ಮತ್ತು ವಿಪರೀತಗಳಿಂದ ಕೂಡಿದ ಮನುಷ್ಯನೊಳಗೆ ನೋವು-ನಲಿವುಗಳಿಗೆ ತೆರೆದುಕೊಳ್ಳುವ ಜೀವವಿದೆ. ಆ ಜೀವದೊಳಗೆ ಯಾವುದಕ್ಕೂ ಅಂಟಿಕೊಳ್ಳದ ಆತ್ಮವಿದೆ.

ಆತ್ಮವಸ್ತುವಿಗೆ ವಿನಾಶವಿಲ್ಲ. ಅದು ಅನಾದಿ, ಅವ್ಯಕ್ತ, ಅನಂತ, ನಿರ್ವಿಕಾರಿ. ಅಕ್ಷರ ಆತ್ಮದ ಗುಣಗಳು ಹೀಗಿವೆ ಎಂದು ವರ್ಣಿಸುವುದಕ್ಕಾಗಲಿ, ಎಣಿಸುವುದಾಗಲಿ ಅಸಾಧ್ಯ. ಆತ್ಮನು ಸತ್ ಚಿತ್ ಆನಂದ ಸ್ವರೂಪಿ. ಇವು ಅಳತೆಗಾಗಲಿ, ವರ್ಣನೆಗಾಗಲಿ ಸಿಗುವಂತಹುದಲ್ಲ. ಈ ಚೇತನ ಸ್ವರೂಪವು ದೇಹವೆಂಬ ಕ್ಷರ ರೂಪದಲ್ಲಿ ಅವಿತಿದೆ. ಯಾವೆಲ್ಲ ಅಂಶಗಳು ಸೇರಿ ಮನುಷ್ಯನಾಗಿದ್ದಾನೆಯೋ ಅವೆಲ್ಲವೂ ಆತ್ಮನನ್ನು ಅವಲಂಬಿಸಿದೆ. ಅವಿನಾಶಿಯಾದ ಆತ್ಮನು ಅಂಗಿಯನ್ನು ಕಳಚಿದಂತೆ ದೇಹದಿಂದ ಮುಕ್ತವಾದರೆ ದೇಹಕ್ಕೆ ಸಂಬಂಧಿಸಿದ ಎಲ್ಲಾ ಅಂಶವೂ ನಾಶವಾಗುತ್ತದೆ. ಆತ್ಮನು ಜೀವದೆಶೆಯಿಂದ ಜೀವಾತ್ಮನಾಗಿ ಲೋಕಸಂಪರ್ಕಕ್ಕೆ ಬಂದಾಗ ಆತನಿಗೆ ವಿವಿಧ ಬಗೆಯ ಹೊಣೆಗಾರಿಕೆಗಳು, ಬಾಂಧವ್ಯಗಳು ವಿಧಿಸಲ್ಪಡುತ್ತವೆ. ಪೂರ್ವಾರ್ಜಿತ ಕರ್ಮಫಲಗಳಿಗೆ ಅನುಸಾರವಾಗಿ ಜೀವನದ ಗತಿಯು ನಿರ್ಧರಿಸಲ್ಪಡುತ್ತದೆ. ಸುಗಂಧದ್ರವ್ಯವಿದ್ದ ಕುಪ್ಪಿಯು ಖಾಲಿಯಾದ ಮೇಲೆಯೂ ಪರಿಮಳಿಸುವಂತೆ ಜೀವಾತ್ಮನು ಪೂರ್ವಜನುಮದ ವಾಸನೆಯನ್ನು ಪಡೆದು ಬಂದಿರುತ್ತಾನೆ. ಅದು ಪ್ರವೃತ್ತಿಯಾಗಿ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಹಳಸಿದ ವ್ಯಂಜನವನ್ನಿಟ್ಟಿದ್ದ ಪಾತ್ರೆಯು ಹಲವು ಭಾರಿ ತೊಳೆದರಷ್ಟೇ ದುರ್ಗಂಧವನ್ನು ಕಳೆದುಕೊಳ್ಳುವಂತೆಯೇ, ಕೆಟ್ಟತನವೂ ಹುಟ್ಟು ಗುಣವಾಗಿ ಕಾಣಿಸಿಕೊಂಡು ಬದುಕಿನ ಕುಲುಮೆಯಲ್ಲಿ ಹದವಾಗಿ ಬೆಂದು ಕಶ್ಮಲಗಳನ್ನು ಕಳೆದುಕೊಂಡು ಜೀವಾತ್ಮವು ಪರಿಶುದ್ಧವಾಗುವುದೂ ನಡೆಯುತ್ತದೆ.

ಜೀವಾತ್ಮನು ಜನ್ಮಾಂತರದ ಸುಕೃತದಿಂದ ದಿವ್ಯತೆಯನ್ನೊಗೂಡಿಕೊಂಡು ಲೋಕಕ್ಕೆ ಬಂದಾಗ ಕೆಲವೊಂದು ಅಪೂರ್ವವಾದ ಸನ್ನಿವೇಶಗಳು ಕಾಣಿಸಿಕೊಳ್ಳುತ್ತವೆ. ಕಲೆಯ ಪರಿಚಯವೆ ಇಲ್ಲದ ಹಿನ್ನಲೆಯಲ್ಲಿ ಹುಟ್ಟಿದ ಮಗುವಿನಲ್ಲಿ ಅಸಾಮಾನ್ಯ ಪ್ರತಿಭೆಯು ಗೋಚರವಾಗುವುದು. ಎಳವೆಯಲ್ಲೆ ಸಾಹಿತ್ಯ ಲಲಿತಕಲೆಗಳಲ್ಲಿ ಆಸಕ್ತಿಯನ್ನು ತೋರುವುದು, ಸಾಧನೆಯ ಮೂಲಕ ಒಲಿಸಿಕೊಳ್ಳುವುದು ಮುಂತಾದ ಬೆರಗುಗಳು ಸಂಭವಿಸುತ್ತವೆ. ಸಮಾಜದ ಉದ್ಧಾರಕ್ಕಾಗಿ, ಜನಜೀವನದ ಪ್ರಗತಿಗಾಗಿ ಶ್ರಮಿಸಿದ ಧೀಮಂತರಲ್ಲಿ ಆತ್ಮಚೈತನ್ಯದ ಸತ್ ಚಿತ್ ಆನಂದ ರೂಪವು ಹೊರಹೊಮ್ಮುತ್ತದೆ. ಜೀವಾತ್ಮನ ಗುಣವು ಇಂದ್ರಿಯಾನುಭವಗಳಿಗೆ ಪೂರಕವಾಗಿ ಪ್ರತಿಫಲಿಸುತ್ತದೆ. ಆಂತರಿಕ ದಿವ್ಯತೆಯೇ ಪ್ರತಿಭೆಯಾಗಿ ಪ್ರಕಟಗೊಳ್ಳುತ್ತದೆ. ಆತ್ಮದ ಆನಂದ ಸ್ವರೂಪವು ಬಾಹ್ಯ ಇಂದ್ರಿಯ ಮತ್ತು ಭಾವಬುದ್ಧಿಗಳ ಮೂಲಕ ಪಡೆಯುವ ಜ್ಞಾನದಲ್ಲಿ ಪ್ರಕಟವಾಗುತ್ತದೆ. ಈ ಆತ್ಮಪ್ರಭೆಗೆ ಜೀವನಾನುಭವಗಳು ಸೇರಿದಾಗ ಅದು ಜ್ಞಾನವಾಗಿ, ಸೌಂದರ್ಯವಾಗಿ ಪ್ರತಿಫಲಿಸುತ್ತದೆ.

ಇದರಿಂದಾಗಿ ಎಳವೆಯಿಂದಲೇ ಕಲಾಸಕ್ತಿಯನ್ನೋ, ಜ್ಞಾನ ದಾಹವನ್ನೋ ಹೊಂದಿರುವ ಮಗುವು ಜೀವನಾನುಭವಗಳಿಗೆ ತೆರೆದುಕೊಳ್ಳುತ್ತ ಕ್ರಿಯಾಶೀಲನಾಗಿ ಬೆಳೆಯುತ್ತಾನೆ. ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಸಾಧಕನಾಗಿ, ಹಲವರಿಗೆ ಪ್ರೇರಕನಾಗಿ ಆತ್ಮಗೌರವದಿಂದ ಬಾಳುತ್ತಾನೆ. ಆತನ ಸಿದ್ಧಿ, ಸಾಧನೆಗಳು ಅಣು ರೂಪದ್ದೇ ಆಗಿದ್ದರೂ ಅದರಲ್ಲಿರುವ ಸೃಜನಶೀಲತೆ ಮತ್ತು ಸೌಂದರ್ಯಗಳು ಮನೋಹರವೂ, ಆನಂದದಾಯಕವೂ ಆಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net