

ಗದಗ: ಮದ್ವೆಯಾಗಲು ಕನ್ಯೆ ನೋಡಿಕೊಂಡು ವಾಪಸ್ ಬರುತ್ತಿದ್ದ ಯುವಕನೊಬ್ಬ ಮಾರ್ಗಮಧ್ಯೆ ಹಳ್ಳದ ನೀರಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಯಕ್ಲಾಸಪುರ ಗ್ರಾಮದಲ್ಲಿ ನಡೆದಿದೆ.
ಟಿಪ್ಪು ಸುಲ್ತಾನ್ (26) ಮೃತ ದುರ್ದೈವಿ. ಗುರುವಾರ ಕನ್ಯೆ ನೋಡಲು ಉಪ್ಪಿನ ಬೆಟಗೇರಿಗೆ ಹೋಗಿದ್ದ ಯುವಕ ಸಂಜೆ ವಾಪಸ್ ಊರಿಗೆ ಹಿಂತಿರುಗುತ್ತಿದ್ದ. ಈ ವೇಳೆ ಹಳ್ಳದ ನೀರಲ್ಲಿ ಕೊಚ್ಚಿಹೋಗಿದ್ದ. ಹಳ್ಳದ ದಂಡೆಯಲ್ಲಿರುವ ಮುಳ್ಳಿನ ಕಂಟಿಯಲ್ಲಿ ಸಿಲುಕಿದ್ದ ಟಿಪ್ಪು ಸುಲ್ತಾನ್ ಮೃತದೇಹವನ್ನು ಸ್ಥಳೀಯರ ಸಹಾಯದಿಂದ ಪೊಲೀಸರು ಹೊರ ತೆಗೆದಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಧಾರಾಕರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಸಾವು-ನೋವು ಸಂಭವಿಸುತ್ತಿದ್ದು, ಜನರ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿದೆ. ಕೆರೆ-ಕಟ್ಟೆ-ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ಕೆಲವೆಡೆ ರಸ್ತೆಗಳು ಕುಸಿದು ಜಲಾವೃತಗೊಂಡಿದೆ.