ಪನೀರ್ ಬಳಕೆಗೆ ಶೀಘ್ರ ಮಾರ್ಗಸೂಚಿ; ಕೇಂದ್ರ ಗ್ರಾಹಕರ ವ್ಯವಹಾರಗಳ ಇಲಾಖೆ ಚಿಂತನೆ

ವಿಜಯವಾಣಿ (3)
Published on

ನವದೆಹಲಿ: ಗ್ರಾಹಕರಿಗೆ ಪೂರೈಸುವ ಊಟ- ತಿನಿಸುಗಳಲ್ಲಿ ‘ಅನಲಾಗ್ ಪನೀರ್’ ಬಳಸಿದ್ದರೆ ಅದನ್ನು ಹೋಟೆಲ್​ಗಳು ಸ್ಪಷ್ಟವಾಗಿ ನಮೂದಿಸಬೇಕು ಎಂಬುದನ್ನು ಕಡ್ಡಾಯಗೊಳಿಸಲು ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯ ಮುಂದಾಗಿದೆ. ಅನಲಾಗ್ ಪನೀರ್​ನ ಪ್ಯಾಕೆಟ್ ಮೇಲೆ ಉತ್ಪಾದಕರು ‘ಡೈರಿಯೇತರ (ನಾನ್-ಡೈರಿ)’ ಎಂಬುದಾಗಿ ನಮೂದಿಸುವುದನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್​ಎಸ್​ಎಸ್​ಎಐ) ಈಗಾಗಲೇ ಕಡ್ಡಾಯಗೊಳಿಸಿದೆ. ಆದರೆ ಈ ನಿಯಮವು ಪ್ರಸ್ತುತ ಹೋಟೆಲ್​ಗಳಲ್ಲಿ ಬಡಿಸುವ ಸಿದ್ಧಪಡಿಸಿದ ಆಹಾರಕ್ಕೆ ಅನ್ವಯಿಸುವುದಿಲ್ಲ.

‘ಅನಲಾಗ್ ಪನೀರ್ ಕೂಡ ನೋಡುವುದಕ್ಕೆ ಮತ್ತು ರುಚಿಯಲ್ಲಿ ನೈಜ ಪನೀರನ್ನೇ ಹೋಲುತ್ತದೆ. ಸೋವಿಯಾದ್ದರಿಂದ ಅದನ್ನು ಹೋಟೆಲ್​ಗಳು ಗ್ರಾಹಕರೆದುರು ಬಹಿರಂಗಪಡಿಸುವುದಿಲ್ಲ. ಇನ್ನು ಮುಂದೆ ಅಡುಗೆಯಲ್ಲಿ ಅನಲಾಗ್ ಪನೀರ್ ಬಳಸಿರುವುದನ್ನು ಗ್ರಾಹಕರಿಗೆ ಹೋಟೆಲ್​ಗಳು ಮೊದಲೇ ತಿಳಿಸಬೇಕು ಎಂಬುದನ್ನು ಕಡ್ಡಾಯ ಮಾಡಲಾಗುವುದು’ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖಾರೆ ತಿಳಿಸಿದ್ದಾರೆ.

ಏನಿದು ಅನಲಾಗ್ ಪನೀರ್?

ಸಿಂಥೆಟಿಕ್ ಅಥವಾ ನಕಲಿ ಪನೀರ್ ಎಂದೂ ಕರೆಯಲ್ಪಡುವ ಅನಲಾಗ್ ಪನೀರನ್ನು ಸಸ್ಯಜನ್ಯ ಎಣ್ಣೆಗಳು, ಪಿಷ್ಟಗಳು, ಎಮಲ್ಸಿಫೈಯರ್​ಗಳಂತಹ ಅಗ್ಗದ, ಡೈರಿಯೇತರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಹಾಲಿನಿಂದ ತಯಾರಿಸಿದ ನೈಜ ಪನೀರ್​ಗೆ ಪರ್ಯಾಯವಾಗಿ ಇದನ್ನು ಬಳಸಲಾಗುತ್ತಿದೆ. ಇದು ಕಡಿಮೆ ಪ್ರೊಟೀನ್, ಅನಾರೋಗ್ಯಕರ ಕೊಬ್ಬು ಮತ್ತು ಕಾರ್ಬೆಹೈಡ್ರೇಟ್​ಗಳನ್ನು ಹೊಂದಿರುತ್ತದೆ. ನೈಜ ಪನೀರ್​ನ ಅರ್ಧದಷ್ಟು ಬೆಲೆಯಲ್ಲಿ ಇದು ಸಿಗುತ್ತದೆ. ಕೆಲವು ಉತ್ಪಾದಕರು ಕಡಿಮೆ ಗುಣಮಟ್ಟದ ಸಸ್ಯಜನ್ಯ ಎಣ್ಣೆ ಮತ್ತಿತರ ಪದಾರ್ಥಗಳನ್ನು ಬಳಸಿ ಇದನ್ನು ತಯಾರಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂಬ ಕೂಗು ಎದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net