ಸಿರಾಜ್​, ಇಶಾಂತ್​ಗೆ ಬೆವರಿಳಿಸಿದ ವೈಭವ್ ಸೂರ್ಯವಂಶಿ! ಐಪಿಎಲ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ 14 ವರ್ಷದ ಬ್ಯಾಟರ್​ | Vaibhav Suryavanshi

ವಿಜಯವಾಣಿ
Published on

Vaibhav Suryavanshi: ಇಂದು ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್​ಆರ್​ ಮತ್ತು ಜಿಟಿ ನಡುವಿನ ರೋಚಕ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ, ಜಿಟಿಗೆ ಬ್ಯಾಟ್ ಮಾಡುವಂತೆ ತಿಳಿಸಿತು. ಅಂತೆಯೇ ಬ್ಯಾಟ್ ಮಾಡಿದ ಗುಜರಾತ್​ ಪಡೆ, 20 ಓವರ್​ ಅಂತ್ಯಕ್ಕೆ 209 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆರ್​ಆರ್​ಗೆ ಓಪನಿಂಗ್ ಬ್ಯಾಟರ್​ಗಳು ಸ್ಫೋಟಕ ಇನ್ನಿಂಗ್ಸ್ ನೀಡಿದ್ದಾರೆ.

ಯಶಸ್ವಿ ಜೈಸ್ವಾಲ್​ ಮತ್ತು ವೈಭವ್ ಸೂರ್ಯವಂಶಿ ಮೊದಲ ಬಾಲ್​ನಿಂದಲೇ ಗುಜರಾತ್ ಬೌಲರ್​ಗಳ ಬೆವರಿಳಿಸಿದರು. ಇವರಿಬ್ಬರ ಪೈಕಿ ಸ್ಫೋಟಕ ಇನ್ನಿಂಗ್ಸ್​ ನೀಡಿದ ವೈಭವ್​, ಕೇವಲ 36 ಎಸೆತದಲ್ಲಿ ಭರ್ಜರಿ ಶತಕ (101 ರನ್​) ಬಾರಿಸುವ ಮೂಲಕ ಹೊಸ ದಾಖಲೆಗೆ ಸಾಕ್ಷಿಯಾದರು. ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್​ನಲ್ಲಿ ವಿಕೆಟ್​ ಕಳೆದುಕೊಂಡ ಸೂರ್ಯವಂಶಿ, 12ನೇ ಓವರ್​ನಲ್ಲಿ ತಮ್ಮ ತಂಡದ ಮೊದಲನೇ ವಿಕೆಟ್​ ಒಪ್ಪಿಸಿದರು. 

ಐಪಿಎಲ್ ಇತಿಹಾಸದಲ್ಲಿ ವೇಗದ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ವೈಭವ್​ ಸೂರ್ಯವಂಶಿ ಸಾಕ್ಷಿಯಾಗಿದ್ದಾರೆ. ಮೊದಲು ಅತ್ಯಂತ ವೇಗದ ಅರ್ಧಶತಕ ಗಳಿಸಿದ ಅವರು, ನಂತರ ಅಷ್ಟೇ ವೇಗದಲ್ಲಿ ಶತಕ ದಾಖಲಿಸಿದರು. ಹಿರಿಯ ಬೌಲರ್​ಗಳಾದ ಮೊಹಮ್ಮದ್​ ಸಿರಾಜ್ ಮತ್ತು ಇಶಾಂತ್ ಶರ್ಮ ಬೌಲಿಂಗ್​ನಲ್ಲಿಯೂ ಬಿಡದ ವೈಭವ್​, ಗುಜರಾತ್ ಟೈಟಾನ್ಸ್ ವೇಗಿಗಳ ಬೆವರಿಳಿಸುವಲ್ಲಿ ಯಶಸ್ವಿಯಾದರು.

ಅಂತಿಮವಾಗಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ರಾಜಸ್ಥಾನ ರಾಯಲ್ಸ್​ ಪಡೆ, ವೈಭವ್ ಸೂರ್ಯವಂಶಿ ಮತ್ತು ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ 'ಯಶಸ್ವಿ' ಗೆಲುವು ದಾಖಲಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net