

ಬೆಂಗಳೂರು: ಡೊಡ್ಮನೆಯ ಕಿರಿಯ ಕುಡಿ ಪುನೀತ್ ರಾಜ್ಕುಮಾರ್ ಅವರು ಭೂತಾಯಿಯ ಮಡಿಲಲ್ಲಿ ಲೀನವಾಗಿದ್ದು, ಕೊಟ್ಯಂತರ ಜನರು ಭಾವುಕ ವಿದಾಯ ಹೇಳಿದ್ದಾರೆ.
ನಗುಮುಖ, ಸರಳ ವ್ಯಕ್ತಿತ್ವದಿಂದಲೇ ಎಲ್ಲರಿಗೂ ಇಷ್ಟವಾಗುತ್ತಿದ್ದ ಅಪ್ಪು ಅಗಲಿಕೆಯ ನೋವು ಕುಟುಂಬಸ್ಥರು ಮಾತ್ರವಲ್ಲ, ಕೋಟ್ಯಂತರ ಅಭಿಮಾನಿಗಳಿಗೂ ಅತೀವವಾಗಿ ಕಾಡುತ್ತಿದೆ. ಬದುಕಿದ್ದಾಗಲೂ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಚಿಲುಮೆಯಂತಿದ್ದ ಅಪ್ಪು, ಇಷ್ಟು ಬೇಗ ಬಾರದೂರಿಗೆ ಏಕೆ ಹೋಗಿಬಿಟ್ರು? ವಿಧಿಯೇ ನೀನೆಷ್ಟು ಕ್ರೂರಿ? ದೇವರೇ ಈ ಸಾವು ನ್ಯಾಯವೇ? ಎಂದು ಪ್ರಶ್ನಿಸುತ್ತಾ ಆ ವಿಧಿಯನ್ನ ಇಡೀ ಕರುನಾಡೇ ಪ್ರಶ್ನಿಸುತ್ತಿದೆ.
ಭಾನುವಾರ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ತಂದೆ ರಾಜ್ಕುಮಾರ್ ಮತ್ತು ತಾಯಿ ಪಾರ್ವತಮ್ಮ ರಾಜ್ಕುಮಾರ್ ಅವರ ಸಮಾಧಿ ಪಕ್ಕದಲ್ಲೇ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿತು. ಇದಾದ ಬಳಿಕ ನೋವಿನಿಂದಲೇ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ಅಪ್ಪು ಅವರನ್ನ ಶಾಂತಿಯುತವಾಗಿ ಕಳುಹಿಸಿಕೊಡಲು ಅಭಿಮಾನಿಗಳು ಸಹಕರಿಸಿದ್ದೀರಿ. ನಿಮಗೆಲ್ಲರಿಗೂ ಧನ್ಯವಾದಗಳು. 'ಅಪ್ಪುಗೆ ನಮಗಿಂತ ಅಪ್ಪ-ಅಮ್ಮ ಅಂದ್ರೆ ಇಷ್ಟ. ಅದಕ್ಕೆ ಬೇಗ ಅವರ ಬಳಿ ಹೋಗಿದ್ದಾನೆ' ಎನ್ನುತ್ತಲೇ ರಾಘಣ್ಣ ಮತ್ತಷ್ಟು ಭಾವುಕರಾದರು.