

ಬೆಂಗಳೂರು: ಮದುವೆಯಾಗು ಎಂದು ಎಷ್ಟೇ ಪೀಡಿಸಿದರೂ, ಕಾಡಿದರೂ ಒಪ್ಪಿಕೊಳ್ಳದ ಯುವತಿ ಮೇಲೆ ಈ ಹುಚ್ಚು ಯುವಕ ಮಚ್ಚಿನಿಂದ ಸಿಕ್ಕಾಪಟೆ ಹಲ್ಲೆ ಮಾಡಿದ್ದಾನೆ. ಆಕೆಯ ಮೈಯೆಲ್ಲ ರಕ್ತಸಿಕ್ತವಾಗುವಷ್ಟು ಭೀಕರವಾಗಿ ಗಾಯಗೊಳಿಸಿದ್ದಾನೆ.
ಮದ್ದೂರು ಮೂಲದ ನಿತ್ಯಶ್ರೀ (27) ಹಲ್ಲೆಗೊಳಗಾದ ಯುವತಿ. ಇಂದು ಬೆಳಗ್ಗೆ 11.30ರ ಹೊತ್ತಿಗೆ ಅನ್ನಪೂರ್ಣೇಶ್ವರಿ ನಗರದ ವಿಶಾಲ್ ಮಾರ್ಟ್ ಬಳಿ ಘಟನೆ ನಡೆದಿದೆ. ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಗಿರೀಶ್ ಎಂಬಾತ ಆರೋಪಿ. ಈತ ಮತ್ತು ನಿತ್ಯಶ್ರೀ ನಡುವೆ ಕಾಲೇಜು ದಿನಗಳಿಂದಲೂ ಸ್ನೇಹ ಇತ್ತು. ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ನಂತರ ಭಿನ್ನಾಭಿಪ್ರಾಯ ಮೂಡಿ ಇಬ್ಬರೂ ಬೇರೆಯಾಗಿದ್ದರು. ಆದರೆ ಬಳಿಕ ಗಿರೀಶ್ನೇ ಮತ್ತೆ ಬಂದಿದ್ದ. ಸದಾ ಪೀಡಿಸುತ್ತಿದ್ದ. ಇವರಿಬ್ಬರ ಜಗಳ ಈ ಹಿಂದೆ ಕೂಡ ಒಮ್ಮೆ ಠಾಣೆಯ ಮೆಟ್ಟಿಲೇರಿತ್ತು. ಆಗ ರಾಜಿ ಮಾಡಿಕೊಂಡಿದ್ದರು. ತಾನಿನ್ನು ಕಾಟ ಕೊಡುವುದಿಲ್ಲ ಎಂದು ಗಿರೀಶ್ ಹೇಳಿದ್ದ. ಈ ಮಧ್ಯೆ ನಿತ್ಯಶ್ರೀ ಮಂಡ್ಯದಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದಳು.
ಇತ್ತೀಚೆಗೆ ಮತ್ತೆ ಆತ ನಿತ್ಯಶ್ರೀಯನ್ನು ಪೀಡಿಸುತ್ತಿದ್ದ. ಮನೆ ಬಳಿ ಬಂದು ಮದುವೆಯಾಗು ಎಂದು ಚಿತ್ರಹಿಂಸೆ ನೀಡುತ್ತಿದ್ದ. ನಿತ್ಯಶ್ರೀಗೆ ಬೇರೊಬ್ಬನೊಂದಿಗೆ ಮದುವೆ ಕಾಯಂ ಆಗಿತ್ತು. ಜೂನ್ದಲ್ಲಿ ಮದುವೆ ನಡೆಯುವುದಿತ್ತು.
ಮದುವೆಗೆ ಶಾಪಿಂಗ್ ಮಾಡಲು ಇಂದು ನಿತ್ಯಶ್ರೀ ವಿಶಾಲ್ ಮಾರ್ಟ್ಬಳಿ ಬಂದಿದ್ದಳು. ಇದೇ ವೇಳೆ ಗಿರೀಶ್ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಆಕೆಯ ಕೈ, ಕಾಲು, ಹೊಟ್ಟೆ, ಕುತ್ತಿಗೆ ಭಾಗಕ್ಕೆ ತೀವ್ರವಾಗಿ ಇರಿದಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.