ನನ್ನ ಮಗ ಹಾಸ್ಟೆಲ್​ ಕಟ್ಟಡದ 2ನೇ ಮಹಡಿಯಿಂದ ಜಿಗಿದು ಜೀವ ಉಳಿಸಿಕೊಂಡ: ಗುಜರಾತ್​ ಮಹಿಳೆಯ ಹೇಳಿಕೆ | Plane Crash

Plane Crash
Published on

Plane Crash : ಗುಜರಾತಿನ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್​ ಇಂಡಿಯಾ-171 ವಿಮಾನವು ಟೇಕಾಫ್ ಆದ 5 ನಿಮಿಷದಲ್ಲೇ ಪತನಗೊಂಡಿದೆ. ಈ ವಿಮಾನ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ಯುತ್ತಿತ್ತು.

ಮೇಘನಿಗಢದ ಘೇಡಾಸರ್ ಕ್ಯಾಂಪ್ ಪ್ರದೇಶದ ವಸತಿ ಪ್ರದೇಶದಲ್ಲಿ ವಿಮಾನ ಪತನಗೊಂಡಿತು. ಇದರಿಂದಾಗಿ ಎರಡು ಬಹುಮಹಡಿ ಕಟ್ಟಡಗಳು ಹಾನಿಗೊಳಗಾಗಿದ್ದು, ಆ ಕಟ್ಟಡಗಳಲ್ಲಿದ್ದ ಅನೇಕ ಜನರು ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ.

ಅಪಘಾತದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಮಿಲಾ ಎಂಬ ಸ್ಥಳೀಯ ಮಹಿಳೆ, ನನ್ನ ಮಗ ಊಟದ ವಿರಾಮದ ಸಮಯದಲ್ಲಿ ಹಾಸ್ಟೆಲ್‌ಗೆ ಹೋಗಿದ್ದ. ಇದೇ ಸಂದರ್ಭದಲ್ಲಿ ವಿಮಾನ ಪತನವಾಯಿತು. ಸದ್ಯ ನನ್ನ ಮಗ ಸುರಕ್ಷಿತನಾಗಿದ್ದಾನೆ. ನಾನು ಅವನೊಂದಿಗೆ ಮಾತನಾಡಿದೆ. ನನ್ನ ಮಗ ಹಾಸ್ಟೆಲ್‌ನ ಎರಡನೇ ಮಹಡಿಯಿಂದ ಹಾರಿ ಜೀವ ಉಳಿಸಿಕೊಂಡಿದ್ದಾನೆ. ಸದ್ಯ ಆತ ಗಾಯಗೊಂಡಿದ್ದಾನೆ ಎಂದು ಹೇಳಿದರು.

ನನ್ನ ಅತ್ತಿಗೆ ಲಂಡನ್‌ಗೆ ಹೋಗುತ್ತಿದ್ದರು. ವಿಮಾನ ಅಪಘಾತದ ಬಗ್ಗೆ ತಿಳಿದ ನಂತರ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಯಲ್ಲಿ ಯುವಕ ಪೂನಂ ಪಟೇಲ್ ಹೇಳಿದರು. ವಿಮಾನ ಅಪಘಾತದಲ್ಲಿ ಗಾಯಗೊಂಡವರನ್ನು ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಮಾನ ಪ್ರಯಾಣಿಕರ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಸೇರುತ್ತಿದ್ದಾರೆ.

ವಿಮಾನ ಅಪಘಾತದ ವೇಳೆ ಹಾಸ್ಟೆಲ್‌ನಲ್ಲಿದ್ದ ಅನೇಕ ಜನರು ಸಾವಿಗೀಡಾಗಿದ್ದಾರೆ ಎಂದು ನಂಬಲಾಗಿದೆ. ಊಟದ ವಿರಾಮವಾಗಿದ್ದರಿಂದ, ಅನೇಕ ವೈದ್ಯಕೀಯ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿದ್ದರು. ಇದೇ ಸಮಯದಲ್ಲಿ ವಿಮಾನ ಪತನವಾಗಿದ್ದು, 20ಕ್ಕೂ ಅಧಿಕ ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ ಎಂದು ನಂಬಲಾಗಿದೆ.

ಆನ್‌ಲೈನ್ ಫ್ಲೈಟ್ ಟ್ರ್ಯಾಕರ್‌ನಲ್ಲಿ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣದ ಕಡೆಗೆ ಮಧ್ಯಾಹ್ನ 1.38ಕ್ಕೆ ಟೇಕಾಫ್​ ಆಯಿತು. ಇದಾದ 5 ನಿಮಿಷದಲ್ಲಿ ವಿಮಾನ ಪತನಗೊಂಡಿದೆ ಎಂದು ವರದಿಯಾಗಿದೆ. ವಿಡಿಯೋವೊಂದು ವೈರಲ್​ ಆಗಿದ್ದು, ವಿಮಾನ ಟೇಕಾಫ್​ ಆಗಿ ಕೆಲವೇ ದೂರ ಸಾಗಿದ ಕೂಡಲೇ ನೆಲಕ್ಕೆ ಅಪ್ಪಳಿಸಿದೆ. ತಕ್ಷಣ ಬೆಂಕಿಯ ಜ್ವಾಲೆ ಹರಡಿದ ದೃಶ್ಯ ವೈರಲ್​ ವಿಡಿಯೋದಲ್ಲಿದೆ.

ವಿಮಾನವು ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ನೇತೃತ್ವದಲ್ಲಿ ಪ್ರಥಮ ಅಧಿಕಾರಿ ಕ್ಲೈವ್ ಕುಂದರ್ ಅವರ ನೇತೃತ್ವದಲ್ಲಿ ಪ್ರಯಾಣ ಬೆಳೆಸಿತ್ತು. ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರಿಗೆ 8200 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು. ಸಹ ಪೈಲಟ್‌ಗೆ 1100 ಗಂಟೆಗಳ ಹಾರಾಟದ ಅನುಭವವಿತ್ತು. ತಾಂತ್ರಿಕ ದೋಷದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net