ಇಷ್ಟವಿಲ್ಲದಿದ್ರೂ ರಘುವಂಶಿಯನ್ನು ಮದುವೆ ಆಗಿದ್ದೇಕೆ ಸೋನಮ್​? ಇದರ ಹಿಂದಿದೆ ಇನ್ನೊಂದು ರೋಚಕ ಕತೆ! Meghalaya Honeymoon Case

Meghalaya Honeymoon Case
Published on

Meghalaya Honeymoon Case : ಮೇಘಾಲಯ ಹನಿಮೂನ್ ಕೊಲೆ ಪ್ರಕರಣ ದೇಶದಲ್ಲೇ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಹನಿಮೂನ್ ಹೆಸರಿನಲ್ಲಿ ತನ್ನ ಪತಿ ರಾಜಾ ರಘುವಂಶಿಯನ್ನು ಮೇಘಾಲಯಕ್ಕೆ ಕರೆದೊಯ್ದ ಪತ್ನಿ ಸೋನಮ್, ಸುಪಾರಿ ಹಂತಕರನ್ನು ನೇಮಿಸಿ ಕೊಲೆ ಮಾಡಿಸಿದ್ದಾಳೆ. ಈ ಸುದ್ದಿ ದೇಶದೆಲ್ಲೆಡೆ ಸಂಚಲನ ಮೂಡಿಸಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸೋನಮ್ ತನ್ನ ಪ್ರಿಯಕರನಿಗಾಗಿ ಈ ದುಷ್ಕೃತ್ಯ ಎಸಗಿದ್ದಾಳೆ. ಈ ಪ್ರಕರಣದ ತನಿಖೆಯಲ್ಲಿ ಒಂದೊಂದೆ ಸ್ಫೋಟಕ ಸಂಗತಿಗಳು ಬೆಳಕಿಗೆ ಬರುತ್ತಿವೆ.

ಆರೋಪಿ ಸೋನಮ್​ಗೆ ರಾಜಾ ರಘುವಂಶಿ ಇಷ್ಟವಿಲ್ಲದಿದ್ದರೆ ಅವರನ್ನೇಕೆ ಮದುವೆಯಾದಳು ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ರಾಜಾ ರಘುವಂಶಿಯನ್ನು ಮದುವೆಯಾಗಲು ಸೋನಮ್​ಗೆ ಒಂದು ಬಲವಾದ ಕಾರಣವಿದೆ. ಮದುವೆಯನ್ನು ನಿರಾಕರಿಸಿದರೆ ತನ್ನ ಅನಾರೋಗ್ಯ ಪೀಡಿತ ತಂದೆಯ ಜೀವಕ್ಕೆ ಅಪಾಯವಿದೆ ಎಂದು ಸೋನಮ್ ಹೆದರುತ್ತಿದ್ದಳು. ತನಗೆ ಇಷ್ಟವಿಲ್ಲದಿದ್ದರೂ ಮದುವೆಗೆ ಒಪ್ಪಿಕೊಂಡಿದ್ದಾಗಿ ಆರೋಪಿಗಳಲ್ಲಿ ಒಬ್ಬನಾದ ಆಕಾಶ್ ರಜಪೂತ್ ಪೊಲೀಸ್ ವಿಚಾರಣೆಯಲ್ಲಿ ಬಹಿರಂಗಪಡಿಸಿದ್ದಾನೆ.

ಸೋನಮ್ ತಂದೆ ದೇವಿ ಸಿಂಗ್ ಕೆಲವು ಸಮಯದಿಂದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಾಜಾ ರಘುವಂಶಿ ಅವರನ್ನು ಮದುವೆಯಾಗುವಂತೆ ಸೋನಮ್​ಗೆ ಆಕೆಯ ತಂದೆ ಸಲಹೆ ನೀಡಿದರು. ತನ್ನ ತಂದೆಯ ಇಚ್ಛೆಯಂತೆ ರಘುವಂಶಿಯನ್ನು ಮದುವೆಯಾಗದಿದ್ದರೆ, ಅವರು ಹೃದಯಾಘಾತದಿಂದ ಸಾಯಬಹುದು ಅಂತ ಸೋನಮ್ ಹೆದರುತ್ತಿದ್ದರು ಎಂದು ರಜಪೂತ್ ಹೇಳಿದ್ದಾನೆ. ಸೋನಮ್ ತನ್ನ ತಂದೆಗೆ ತೊಂದರೆ ಕೊಡಲು ಮತ್ತು ತಂದೆಯ ಆರೋಗ್ಯವನ್ನು ಮತ್ತಷ್ಟು ಅಪಾಯಕ್ಕೆ ಸಿಲುಕಿಸದಿರಲು ಬಯಸದಿದ್ದಳು. ಹೀಗಾಗಿ ರಘುವಂಶಿಯನ್ನು ವಿವಾಹವಾದರು ಎಂದು ಆಕಾಶ್ ರಜಪೂತ್ ಹೇಳಿದ್ದಾನೆ.

ಸೋನಮ್​, ರಾಜಾ ರಘುವಂಶಿಯನ್ನು ಮದುವೆಯಾದ ಕೂಡಲೇ ಆಕೆಯ ಪ್ರಿಯಕರ ರಾಜ್ ಕುಶ್ವಾಹ ಕೋಪಗೊಂಡಿದ್ದನು ಮತ್ತು ಮದುವೆಯಾದ ಕೇವಲ ಐದು ದಿನಗಳ ನಂತರ ರಾಜಾ ರಘುವಂಶಿಯಯನ್ನು ಕೊಲ್ಲಲು ರಾಜ್ ಕುಶ್ವಾಹ ಪ್ಲಾನ್​ ಮಾಡಿದನು ಎಂದು ಪೊಲೀಸರು ತಿಳಿಸಿದ್ದಾರೆ.

ಅಂದಹಾಗೆ, ಮಧ್ಯಪ್ರದೇಶದ ಇಂದೋರ್‌ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಮೇ 11 ರಂದು ವಿವಾಹವಾದರು. ಅದೇ ತಿಂಗಳು 20 ರಂದು ಅವರು ತಮ್ಮ ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದರು. ಆರಂಭದಲ್ಲಿ, ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಯೋಜಿಸಿದ್ದರು. ಆದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಿದ್ದರಿಂದ ಮೇಘಾಲಯಕ್ಕೆ ತಮ್ಮ ಪ್ಲಾನ್​ ಬದಲಾಯಿಸಿದರು. ನವದಂಪತಿ ಮೇ 20 ರಂದು ತಮ್ಮ ಹನಿಮೂನ್‌ಗೆ ಮೇಘಾಲಯಕ್ಕೆ ತೆರಳಿದರು. ಮೇ 23 ರಂದು ತಮ್ಮ ವಸತಿಗೃಹದಿಂದ ಸ್ಕೂಟಿಯಲ್ಲಿ ಹೊರಟು ಇದ್ದಕ್ಕಿದ್ದಂತೆ ನಾಪತ್ತೆಯಾದರು. ಸ್ಕೂಟರ್ ಒಂದು ಹಳ್ಳಿಯ ಹೊರವಲಯದಲ್ಲಿ ಪತ್ತೆಯಾಗಿತ್ತು. ಆದಾಗ್ಯೂ, ಅವರು ಕಣ್ಮರೆಯಾದ 11 ದಿನಗಳ ನಂತರ (ಜೂನ್ 2 ರಂದು), ಪೊಲೀಸರು ರಘುವಂಶಿ ಅವರ ಶವವನ್ನು ಸೊಹ್ರಾದಲ್ಲಿನ ಜಲಪಾತದ ಬಳಿಯ ಆಳವಾದ ಕಣಿವೆಯಲ್ಲಿ ಪತ್ತೆ ಮಾಡಿದರು. ಅವರ ದೇಹದ ಮೇಲೆ ಚಾಕುವಿನಿಂದಾದ ಗಾಯಗಳಿದ್ದ ಕಾರಣ, ಪೊಲೀಸರು ಕೊಲೆ ಎಂದು ಶಂಕಿಸಿದರು. ಸೋನಮ್ ಎಲ್ಲಿದ್ದಾರೆಂದು ಪತ್ತೆಯಾಗದ ಕಾರಣ ಎಲ್ಲರೂ ಭಯಭೀತರಾಗಿದ್ದರು. ಈ ಮಧ್ಯೆ, ವಿಶೇಷ ಪಡೆ ಆಕೆಗಾಗಿ ಕಾಡಿನಲ್ಲಿ ಹುಡುಕಾಟ ನಡೆಸಿತು. ಮತ್ತೊಂದೆಡೆ, ಪೊಲೀಸರು ಪ್ರಕರಣದ ತನಿಖೆಯ ವೇಗವನ್ನು ಹೆಚ್ಚಿಸಿದರು.

ಸೋನಮ್ ಮತ್ತು ಕುಶ್ವಾಹ ಅವರ ಯೋಜನೆಯಂತೆಯೇ ಎಲ್ಲವೂ ನಡೆಯಿತು. ಆದರೆ, ಕೊಲೆಗೆ ಅವರು ಬಳಸಿದ್ದ ಹರಿತವಾದ ಆಯುಧ ಎಲ್ಲವನ್ನೂ ತಲೆಕೆಳಗು ಮಾಡಿತು. ರಘುವಂಶಿ ಕೊಲೆ ಪ್ರಕರಣದ ತನಿಖೆಯ ಸಮಯದಲ್ಲಿ, ಸೋನಮ್ ಜೀವಂತವಾಗಿದ್ದಾಳೆ ಎಂಬ ಅನುಮಾನ ಮೂಡಿತು. ಅಲ್ಲದೆ, ಆಕೆಯೇ ಕೊಲೆ ಮಾಡಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿತು. ಸಾಮಾನ್ಯವಾಗಿ, ಮೇಘಾಲಯದಲ್ಲಿ ಅಂತಹ ಆಯುಧವನ್ನು ಬಳಸಲಾಗುವುದಿಲ್ಲ. ಹೀಗಾಗಿ ಹೊರಗಿನವರು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತು. ಬಳಿ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಸೋನಮ್​, ರಾಜ್ ಕುಶ್ವಾಹ ಜತೆ ನಿಯಮಿತವಾಗಿ ಸಂಪರ್ಕದಲ್ಲಿರುವುದು ತಿಳಿದುಬಂತು. ಸೋನಮ್, ರಾಜಾ ರಘುವಂಶಿ ಅವರ ತಾಯಿಯೊಂದಿಗೆ ಮಾತನಾಡಿದ ಕೊನೆಯ ಮಾತುಗಳು ಸಹ ಪೊಲೀಸರಿಗೆ ಅನುಮಾನ ಉಂಟುಮಾಡಿದವು. ಅಲ್ಲದೆ, ಅವರಿಬ್ಬರೂ ಒಟ್ಟಿಗೆ ಇರುವ ಫೋಟೋಗಳ ಯಾವುದೇ ಸ್ಟೇಟಸ್‌ಗಳನ್ನು ಪೋಸ್ಟ್ ಮಾಡದ ಕಾರಣ ಅನುಮಾನಗಳು ಇನ್ನಷ್ಟು ಬಲಗೊಂಡವು ಎಂದು ಪೊಲೀಸ್ ಅಧಿಕಾರಿ ಬಹಿರಂಗಪಡಿಸಿದರು.

ಈ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಸಂಗತಿ ಬೆಳಕಿಗೆ ಬಂದಿದೆ. ಅದೇನೆಂದರೆ, ಈ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜ್ ಕುಶ್ವಾಹ ಕೂಡ ಮೃತ ರಾಜಾ ರಘುವಂಶಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ. ಈ ವಿಡಿಯೋವನ್ನು ಮೃತರ ಸಹೋದರಿಯೊಬ್ಬರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಂದಹಾಗೆ, ಸೋನಮ್ ತನ್ನ ತಂದೆಯ ಕಂಪನಿಯಲ್ಲಿ ಕೆಲಸ ಮಾಡುವ ರಾಜ್ ಕುಶ್ವಾಹನನ್ನು ಪ್ರೀತಿಸುತ್ತಿದ್ದಳು. ಆದರೆ, ಆ ಬಗ್ಗೆ ಹಿರಿಯರಿಗೆ ಹೇಳುವ ಧೈರ್ಯ ಇರಲಿಲ್ಲ. ಆದ್ದರಿಂದ, ಅವಳು ರಾಜಾ ರಘುವಂಶಿಯನ್ನು ಮದುವೆಯಾದಳು. ಬಳಿಕ ತಮ್ಮ ಪ್ರೇಮಕ್ಕೆ ರಘುವಂಶಿ ಅಡ್ಡಿಯಾಗುತ್ತಾನೆಂದು ಭಾವಿಸಿ, ಆತನನ್ನು ಕೊಲ್ಲಲು ಸೋನಮ್ ಮತ್ತು ಕುಶ್ವಾಹ ಸಂಚು ರೂಪಿಸಿದರು. ಅದನ್ನು ಕಾರ್ಯಗತಗೊಳಿಸಲು, ಸುಪಾರಿ ಹಂತಕರನ್ನು ಏರ್ಪಡಿಸಿದರು.

ಸೋನಮ್​ ಮೇಘಾಲಯಕ್ಕೆ ಹನಿಮೂನ್​ ಪ್ಲಾನ್​ ಮಾಡಿದಳು. ಆದರೆ, ಕುಶ್ವಾಹ ಮೇಘಾಲಯಕ್ಕೆ ಹೋಗಲಿಲ್ಲ. ಬದಲಾಗಿ ಫೋನ್‌ನಲ್ಲಿ ಸೋನಮ್ ಜೊತೆ ಸಂಪರ್ಕದಲ್ಲಿದ್ದನು. ಯೋಜನೆಯ ಪ್ರಕಾರ, ಸೋನಮ್, ರಾಜಾ ರಘುವಂಶಿಯನ್ನು ಚಿರಾಪುಂಜಿಯ ಸಂಚಾರವಿಲ್ಲದ ರಸ್ತೆಗೆ ಕರೆದೊಯ್ದಳು. ಅಲ್ಲಿ, ಸುಪಾರಿ ಹಂತಕರು ಆತನನ್ನು ಕೊಂದರು. ನಂತರ, ಸೋನಮ್ ಸೇರಿದಂತೆ ಮೂವರು ಆರೋಪಿಗಳು ಅಸ್ಸಾಂನ ಗುವಾಹಟಿಗೆ ಹೋಗಿ, ಅಲ್ಲಿಂದ ಬೇರೆ ಬೇರೆಯಾದರು. ಈ ನಡುವೆ ಸೋನಮ್, ಪೊಲೀಸರಿಗೆ ರಘುವಂಶಿಯನ್ನು ತಾನು ಕೊಂದಿಲ್ಲ, ಬದಲಿಗೆ ಯಾರೋ ಅವರನ್ನು ಅಪಹರಿಸಿದ್ದಾರೆ ಎಂದು ಹೇಳಿದಳು. ಆದರೆ, ತನಿಖೆಯಲ್ಲಿ ಆಕೆಯ ಕಳ್ಳಾಟ ಎಲ್ಲವು ಬಯಲಾಯಿತು.

ಮತ್ತೊಂದೆಡೆ, ಈ ಪ್ರಕರಣದಲ್ಲಿ ಇಂದೋರ್‌ನ ವಿಶಾಲ್ ಸಿಂಗ್ ಚೌಹಾಣ್ (22), ಉತ್ತರ ಪ್ರದೇಶದ ಲಲಿತಪುರದ ರಾಜ್ ಸಿಂಗ್ ಕುಶ್ವಾಹ (21) ಮತ್ತು ಆಕಾಶ್ ರಜಪೂತ್ (19) ಎಂಬುವರನ್ನು ಬಂಧಿಸಲಾಗಿದೆ. ಮತ್ತೊಂದೆಡೆ, ದೃಶ್ಯ ಪುನರ್ನಿರ್ಮಾಣಕ್ಕಾಗಿ ಪೊಲೀಸರು ಎಲ್ಲ ಆರೋಪಿಗಳನ್ನು ಮೇಘಾಲಯಕ್ಕೆ ಕರೆದೊಯ್ದರು. ಈ ಪ್ರಕ್ರಿಯೆಯಲ್ಲಿ, ಆಕೆಯನ್ನು ವಿಮಾನದಲ್ಲಿ ಕರೆದೊಯ್ಯುವ ದೃಶ್ಯಗಳು ವೈರಲ್ ಆಗುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net