

ಮೂಡಿಗೆರೆ: ಕಾಡಾನೆ ದಾಳಿಯಿಂದ ಅಮಾಯಕರ ಪ್ರಾಣ ಹಾನಿ ಹೆಚ್ಚಾಗುತ್ತಿದೆ. ರೈತರ ಬೆಳೆ ನಾಶವಾಗುತ್ತಿದೆ. ರೈತರು ಮತ್ತು ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗಲು ಹಾಗೂ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಕಾಡಾನೆ ಹಾವಳಿ ನಿಯಂತ್ರಿಸಲು ಶಾಶ್ವತ ಯೋಜನೆ ರೂಪಿಸಬೇಕು. ಅದಕ್ಕಾಗಿ ಸರ್ಕಾರ ತಜ್ಞರನ್ನೊಳಗೊಂಡ ಸದನ ಸಮಿತಿ ರಚಿಸಬೇಕು ಎಂದು ರಾಜ್ಯ ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಮುತ್ತಪ್ಪ ಸರ್ಕಾರ ಒತ್ತಾಯಿಸಿದರು.
ಆಲ್ದೂರು ಸಮೀಪದ ಕಂಚಿನಕಲ್ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಕಿನ್ನಿ ಅವರ ಮನೆಗೆ ಮಹಾಮಂಡಳದ ಪದಾಧಿಕಾರಿಗಳು ಭೇಟಿ ನೀಡಿ ಧನಸಹಾಯ ನೀಡಿದ ಬಳಿಕ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವಸತಿ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಳೆದ 20 ವರ್ಷದಲ್ಲಿ ರಾಜ್ಯದಲ್ಲಿ 80 ಜನರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. 110 ಮಂದಿ ಗಂಭೀರ ಗಾಯಗೊಂಡಿದ್ದಾರೆ. 40 ಮಂದಿ ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ. 30ಕ್ಕೂ ಹೆಚ್ಚು ಧ್ವಂಸವಾಗಿವೆ. ಚಿಕ್ಕಮಗಳೂರು, ಕೊಡಗು, ಮಂಗಳೂರು, ಹಾಸನ ಜಿಲ್ಲೆಗಳಲ್ಲಿ ನಿತ್ಯವೂ ಬೆಳೆ ಹಾನಿಯಾಗುತ್ತಿದೆ. ಸಕಲೇಶಪುರದಿಂದ 3, ಮೂಡಿಗೆರೆ ತಾಲೂಕಿನಿಂದ 4 ಕಾಡಾನೆಗಳನ್ನು ಸೆರೆಹಿಡಿದು ಸಾಗಿಸಿರುವುದು ಬಿಟ್ಟರೆ ಉಳಿದಂತೆ ರಾಜ್ಯದಲ್ಲಿ 650 ಕಾಡಾನೆಗಳು ಜನವಸತಿ ಪ್ರದೇಶದಲ್ಲಿ ಸಂಚರಿಸುತ್ತ ಸಾರ್ವಜನಿಕರಿಗೆ ತೊಂದರೆ ನೀಡುತ್ತಿವೆ ಎಂದು ದೂರಿದರು.
ಕಾಡಾನೆ ಭಯದಿಂದ ರೈತರು ಭತ್ತದ ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ಕಾಫಿ, ಅಡಕೆ, ಬಾಳೆ ತೋಟದ ಕೆಲಸಕ್ಕೆ ರೈತರು ಮತ್ತು ಕೂಲಿಕಾರ್ಮಿಕರು ಹೋಗುತ್ತಿಲ್ಲ. ಅರಣ್ಯದಲ್ಲಿ ವಾಸವಿರುವ ಆದಿವಾಸಿಗಳು ಜೀವಭಯದಲ್ಲಿ ಬದುಕುತ್ತಿದ್ದಾರೆ. ಕಂಚಿನಕಲ್ ಗ್ರಾಮದ ಕಿನ್ನಿ ಅವರ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂ. ಪರಿಹಾರ ನೀಡಬೇಕು. ಗ್ರಾಮಕ್ಕೆ ಸರ್ಕಾರ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಿ, ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸಬೇಕು. ಆ ಗ್ರಾಮ ಮೂಲ ಸೌಲಭ್ಯ ವಂಚಿತವಾಗಿದೆ. ಮುಖ್ಯ ರಸ್ತೆಗೆ ಬರಬೇಕಾದರೆ 4 ಕಿ.ಮೀ ನಡೆಯಬೇಕು. ಇದೀಗ ನಿವಾಸಿಗಳು ಕಾಡಾನೆ ಭಯದಿಂದ ಮುಖ್ಯರಸ್ತೆಗೆ ಬರಲು ಹಿಂಜರಿಯುತ್ತಿದ್ದಾರೆ. ಗ್ರಾಮದ ಎಲ್ಲ ಕುಟುಂಬಗಳಿಗೂ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಿಎಂ ಬಳಿಗೆ ನಿಯೋಗ:
ಗ್ರಾಮದಲ್ಲಿ ಕಾಡಾನೆ ಇರುವ ಮಾಹಿತಿ ಪಡೆದು ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಪಕ್ಕದ ಜಿಲ್ಲೆಗೆ ಅಟ್ಟಿದರೆ ಅಲ್ಲಿನ ಅಧಿಕಾರಿಗಳ ತಂಡ ಮತ್ತೊಂದು ಜಿಲ್ಲೆಗೆ ಅಟ್ಟುತ್ತಾರೆ. ಜನವಸತಿ ಪ್ರದೇಶಕ್ಕೆ ಕಾಡಾನೆಗಳು ತೆರಳದಂತೆ ಅರಣ್ಯದ ಸುತ್ತ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಸರ್ಕಾರ 100 ಕೋಟಿ ರೂ. ಘೋಷಿಸಿದೆ. ಇದರಿಂದ ಪ್ರಯೋಜನವಿಲ್ಲ ಎಂದು ಮುತ್ತಪ್ಪ ಹೇಳಿದರು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದರೆ ಸರ್ಕಾರ ಸಮೀಕ್ಷೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅದಕ್ಕಾಗಿ ತಜ್ಞರನ್ನೊಳಗೊಂಡ ಸದನ ಸಮಿತಿ ರಚಿಸಬೇಕು. ಸದನ ಸಮಿತಿ ವರದಿಯಂತೆ ಶಾಶ್ವತ ಯೋಜನೆ ಜಾರಿಗೊಳಿಸಬೇಕು. ಈ ಬಗ್ಗೆ ಸದ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅರಣ್ಯ ಸಚಿವ ಈಶ್ವರ ಕಂಡ್ರೆ ಅವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರು.
ರಾಜ್ಯ ವನವಾಸಿ ಕಲ್ಯಾಣ ಮುಖ್ಯಸ್ಥ ಜಯರಾಮ್, ವನವಾಸಿ ಜಿಲ್ಲಾಧ್ಯಕ್ಷ ಚಂದ್ರಶೇಖರ್, ತಾಪಂ ಮಾಜಿ ಸದಸ್ಯ ಸುಂದರಕುಮಾರ್, ಲ್ಯಾಂಪ್ಸ್ ಸಹಕಾರ ಸಂಘದ ಸಿಇಒ ಎಚ್.ಕೆ.ಕೃಷ್ಣಪ್ಪ, ಆದಿವಾಸಿ ಮುಖಂಡರಾದ ಬಿ.ಎಂ.ಕೃಷ್ಣ, ರಾಜೇಶ್, ಕೃಷ್ಣ ಇತರರಿದ್ದರು.