

ಬೀರೂರು: ಕಡೂರು-ಬೀರೂರು ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆರಂಭವಾದ ಮಹತ್ವಾಕಾಂಕ್ಷೆಯ ಭದ್ರಾ ಕುಡಿಯುವ ನೀರಿನ ಯೋಜನೆಯಲ್ಲಿ ಹಲವು ತಾಂತ್ರಿಕ ದೋಷಗಳಿಂದ ಅವಳಿ ಪಟ್ಟಣದ ಜನತೆಯ ಸ್ಥಿತಿ ಸಮುದ್ರದ ನಂಟಸ್ತನ ಉಪ್ಪಿಗೆ ಬಡತನ ಎನ್ನುವಂತಾಗಿದೆ.
ಕಡೂರು ಮತ್ತು ಬೀರೂರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸಲು 2010ರಲ್ಲಿ ಭದ್ರಾ ಕುಡಿಯುವ ನೀರು ಯೋಜನೆಗೆ ಅಂದಿನ ಶಾಸಕ ಕೆ.ಎಂ.ಕೃಷ್ಣಮೂರ್ತಿ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದು ಯೋಜನೆಗೆ ಹಲವಾರು ಅಡೆತಡೆಗಳು ಉಂಟಾಗಿದ್ದರಿಂದ ಮಂದಗತಿಯಲ್ಲಿ ಸಾಗುತ್ತಿತ್ತು. ನಂತರ ಶಾಸಕರಾಗಿ ಆಯ್ಕೆಯಾದ ವೈಎಸ್‌ವಿ ದತ್ತ ಭದ್ರಾ ಯೋಜನೆಗಿದ್ದ ಸಾಕಷ್ಟು ಅಡೆತಡೆಗಳನ್ನು ನಿವಾರಿಸಿ 2013-14 ರಲ್ಲಿ ಸುಮಾರು 24 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಪೂರ್ಣಗೊಳಿಸಿ ಚಾಲನೆ ನೀಡಿದರು.
ಯೋಜನೆಯಂತೆ ಲಕ್ಕವಳ್ಳಿಯ ಭದ್ರಾ ಡ್ಯಾಂನಿಂದ ತರೀಕೆರೆ ಮಾರ್ಗವಾಗಿ ಬೀರೂರು ಮತ್ತು ಕಡೂರು ಪಟ್ಟಣಗಳಿಗೆ ಭದ್ರಾ ನೀರು ಪೂರೈಕೆಯಾಗಲು ಆರಂಭವಾಯಿತು. ಅದರೆ ಯೋಜನೆಯ ನಿರ್ವಹಣೆಯೇ ದೊಡ್ಡ ಸವಾಲಾಗಿತ್ತು. ದಿನ ಕಳೆದಂತೆ ಅವಳಿ ಪಟ್ಟಣಗಳ ಪುರಸಭೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿಂದ್ದರಿಂದ ನೀರು ಪೂರೈಕೆಗೆ ಮತ್ತೆ ಸಮಸ್ಯೆ ಉಂಟಾಗಿತ್ತು. ನಂತರ ಶಾಸಕರ ವಿಶೇಷ ಅನುದಾನದಲ್ಲಿ ಅನುದಾನ ಪಡೆದು ವಿದ್ಯುತ್ ಬಿಲ್ ಪಾವತಿಸಿದ ನಂತರ ನೀರು ಪೂರೈಕೆ ಆರಂಭವಾಯಿತು.
ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದ ಅವಳಿ ಪಟ್ಟಣಗಳ ಜನತೆ ಭದ್ರಾ ನದಿ ಹರಿವಿನಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ ನಂತರದ ದಿನಗಳಲ್ಲಿ ಕಡೂರು ಮತ್ತು ಬೀರೂರು ಪುರಸಭೆ ಸರಿಯಾಗಿ ನೀರಿನ ಘಟಕಗಳನ್ನು ನಿರ್ವಹಣೆ ಮಾಡದಿರುವುದರಿಂದ ನೀರು ಪೂರೈಕೆಯಲ್ಲಿ ಮತ್ತೆ ಸಮಸ್ಯೆ ಎದುರಾಯಿತು. ಅಂದು ಆರಂಭವಾದ ಸಮಸ್ಯೆಗೆ ಇದುವರೆಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
ಬೀರೂರು ಪಟ್ಟಣದಲ್ಲಿ 15-20 ದಿನಗಳಿಂದ ಭದ್ರಾ ನೀರು ಬಾರದೆ ಜನರು ಕಂಗಾಲಾಗಿದ್ದಾರೆ. ಕೆಲವರು ಅನಿವಾರ್ಯವಾಗಿ 400 ರೂ. ನೀಡಿ ಟ್ಯಾಂಕರ್‌ಗಳಿಂದ ನೀರು ಖರೀದಿಸಿದರೆ, ಕೂಲಿ ಕಾರ್ಮಿಕರು ಪುರಸಭೆ ನೀರು ಸರಬರಾಜು ವಾಹನವನ್ನು ಕಾಯುತ್ತ ಕೂರುವಂತಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತಾಂತ್ರಿಕ ದೋಷ ಸರಿಪಡಿಸಿ ಸಮರ್ಪಕವಾಗಿ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು.
ತಿಂಗಳಲ್ಲಿ ಎರಡು ಬಾರಿ ಸ್ಥಗಿತ: ಪೈಪ್, ಮೋಟಾರ್, ಜಾಕ್‌ವೆಲ್, ಬೈಪಾಸ್, ವಿದ್ಯುತ್, ಕಾರ್ಮಿಕರಿಗೆ ಸಂಬಳ ಸೇರಿದಂತೆ ಏನಾದರೊಂದು ಸಮಸ್ಯೆಗಳಿಂದ ತಿಂಗಳಲ್ಲಿ ಒಂದೆರಡು ಬಾರಿ ಭದ್ರಾ ನೀರು ಸರಬರಾಜು ಪೂರೈಕೆ ಸ್ಥಗಿತಗೊಳ್ಳುತ್ತದೆ. ತರೀಕೆರೆ ನೀರು ಶುದ್ಧೀಕರಣ ಘಟಕವನ್ನು ಕಡೂರು ಪುರಸಭೆ ಹಾಗೂ ಲಕ್ಕವಳ್ಳಿ ಹತ್ತಿರದ ಜಾಕ್‌ವೆಲ್ ಅನ್ನು ಬೀರೂರು ಪುರಸಭೆ ನಿರ್ವಹಣೆ ಮಾಡುತ್ತಿದೆ. ಬೀರೂರು ಪುರಸಭೆ ನೀರು ಸರಬರಾಜು ನಿರ್ವಹಣೆಗೆ ವಾರ್ಷಿಕ 60 ಲಕ್ಷ ರೂ. ವ್ಯಯಿಸುತ್ತಿದ್ದರೂ ನಾಗರಿಕರ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುತ್ತಿಲ್ಲ. ಹೀಗೆ ನಾನಾ ಕಾರಣಗಳಿಂದ ಅವಳಿ ಪಟ್ಟಣಗಳಿಗೆ ನೀರು ಸರಬರಾಜು ವ್ಯವಸ್ಥಿತವಾಗಿ ಪೂರೈಕೆಯಾಗುತ್ತಿಲ್ಲ.
ದೊರೆಯದ ಶಾಶ್ವತ ಪರಿಹಾರ: ಭದ್ರಾ ಕುಡಿಯುವ ನೀರು ಪೂರೈಕೆಯಾಗದೆ 18 ದಿನಗಳು ಕಳೆದಿದೆ. ಈ ಸಮಸ್ಯೆ ಹೊಸದಲ್ಲ. ವರ್ಷದಲ್ಲಿ ನಾಲ್ಕೈದು ಬಾರಿ ಈ ಸಮಸ್ಯೆ ಎದುರಿಸುತ್ತಿದೆ. ಆದರೆ ಸ್ಥಳೀಯ ಸಂಸ್ಥೆ ಗಳು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವಿಫಲವಾಗುತ್ತಿವೆ. ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆಗೆ ಸಂಬಂಧಿಸಿದ 50-60 ಕೊಳವೆ ಬಾವಿಗಳಿದ್ದು ಇಂಥ ಸಮಸ್ಯೆ ಎದುರಾದಾಗ ಆ ಕೊಳವೆ ಬಾವಿಗಳಿಂದ ಪಟ್ಟಣಕ್ಕೆ ನೀರು ಒದಗಿಸಬಹುದು. ಆದರೆ ಪುರಸಭೆ ಅದನ್ನು ಅನುಷ್ಠಾನಕ್ಕೆ ತರದೆ ಭದ್ರಾ ಕುಡಿಯುವ ನೀರಿನ ಪೂರೈಕೆ ಮಾಡದಿರುವುದು ವಿಷಾದನೀಯ ಎನ್ನುತ್ತಾರೆ ಸರಸ್ವತಿಪುರಂ ಬಡಾವಣೆ ನಿವಾಸಿ ನವೀನ್.
ಭದ್ರಾ ಕುಡಿಯುವ ನೀರನ್ನು ಪಟ್ಟಣದ ಜನತೆಗೆ ಒದಗಿಸಲು ಹರಸಾಹಸಪಡುತ್ತಿದ್ದೇವೆ. ನೀರು ಶುದ್ಧೀಕರಣ ಘಟಕದಲ್ಲಿ 15 ದಿನಗಳಿಂದ ನಿರಂತರ ತಾಂತ್ರಿಕ ಕೆಲಸ ಮಾಡುತ್ತಿದ್ದೇವೆ. ಮೋಟಾರ್ ಸರಿಯಾಗಿ ಆನ್ ಮಾಡುವ ಹೊತ್ತಿಗಾಗಲೇ ಮತ್ತೆ ಕೆಟ್ಟು ಹೋಗಿದೆ. ಮತ್ತೆ ಬೆಂಗಳೂರಿನ ತಜ್ಞರು ಬಂದು ಪರೀಕ್ಷಿಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಸರಿಯಾಗಿ ನೀರು ಪೂರೈಸಲಾಗುವುದು ಎನ್ನುತ್ತಾರೆ ಪುರಸಭೆ ಇಂಜಿನಿಯರ್ ವೀಣಾ.