ಶಿವಮೊಗ್ಗದ ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿ ಹಣ ಸಹಾಯ ಮಾಡಿದ ಪೇಜಾವರ ಶ್ರೀಗಳು

shimoga harsha
Published on

ಉಡುಪಿ: ಇತ್ತೀಚಿಗೆ ಕೊಲೆಯಾದ ಭಜರಂಗದಳ ಕಾರ್ಯಕರ್ತ ಹರ್ಷನ ಮನೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಮಠದ ವತಿಯಿಂದ ಶುಕ್ರವಾರ ಹರ್ಷನ ಪಾಲಕರಿಗೆ 10 ಸಾವಿರ ರೂ. ಹಸ್ತಾಂತರಿಸಲಾಯಿತು. ಬಳಿಕ ಮಾತನಾಡಿದ ಶ್ರೀಗಳು, ಹರ್ಷನ ಅಗಲುವಿಕೆಯಿಂದ ಆತನ ಹೆತ್ತವರು ಅನುಭವಿಸುತ್ತಿರುವ ನೋವು ದುಃಖದಲ್ಲಿ ನಮಗೆ ಸಹಾನುಭೂತಿ ಇದೆ. ಇಂತಹ ಹೇಯಕೃತ್ಯಗಳ ಮೂಲಕ ನಮ್ಮ ಸಂಘಟನೆಗಳ ನೈತಿಕ ಸ್ಥೈರ್ಯ ಕುಗ್ಗಿಸಲು ಪ್ರಯತ್ನಿಸುತ್ತಿರುವುದನ್ನು ಖಂಡಿಸುತ್ತೇವೆ. ಸರ್ಕಾರ ಮತ್ತು ಕಾನೂನು ಹರ್ಷನ ಸಾವಿಗೆ ನ್ಯಾಯ ಕೊಡಿಸುತ್ತೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದರು.

ಭಗವಂತನು ಈ ದುಃಖ ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ. ಸಮಾಜ, ಸಂಘ ಸಂಸ್ಥೆಗಳು, ಸಾಧು ಸಂತರು, ಸರ್ಕಾರ ಅನೇಕ ವಿಧದಲ್ಲಿ ಹರ್ಷನ ಪಾಲಕರಿಗೆ ಸಾಂತ್ವನ ನೀಡಿರುವುದನ್ನು ಕಂಡು ಸಮಾಧಾನವಾಗಿದೆ. ಇಂಥ ದುರ್ಘಟನೆಗಳು ಮುಂದೆ ನಡೆಯದಿರಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.

ಗೋಸಾಯಿ ಮಠದ ಸ್ವಾಮೀಜಿ, ಶ್ರೀಗಳ ಆಪ್ತರಾದ ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್​ ಹಾಗೂ ಸಂಘಟನೆಗಳ ಪ್ರಮುಖರಿದ್ದರು.

ವಿಶ್ವನಾಥನ ತಾಯಿಗೆ 1 ಲಕ್ಷ ರೂಪಾಯಿ: ಕೆಲವರ್ಷಗಳ ಹಿಂದೆ ಕೋಮು ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡ ಹಿಂದೂ ಕಾರ್ಯಕರ್ತ ವಿಶ್ವನಾಥನ ಮನೆಗೂ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ ನೀಡಿ, ದಯನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಆತನ ತಾಯಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಮಾನವೀಯತೆ, ದಯೆ, ಅನುಕಂಪಗಳು ಪ್ರಚಾರಕ್ಕೆ ಎಂಬಂತಾಗಬಾರದು. ವಿಶ್ವನಾಥನ ಮರಣದ ಸಂದರ್ಭ ಭರವಸೆ ನೀಡಿದವರು ಒಂದಿಷ್ಟನ್ನು ಒದಗಿಸಿದ್ದರೂ ಇವತ್ತು ಈ ಹಿರಿಜೀವ ಇಷ್ಟು ಬವಣೆ ಪಡುವ ಅಗತ್ಯ ಇರಲಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿ. ಇನ್ನಾದರೂ ಸಮಾಜ ಈ ಕುಟುಂಬಕ್ಕೂ ಒಂದಷ್ಟು ನೆರವಾಗಬೇಕು ಎಂದು ಶ್ರೀಗಳು ಮನವಿ ಮಾಡಿದರು. ಶ್ರೀಗಳು ವಿಶ್ವನಾಥನ ತಾಯಿ ಮೀನಾಮ್ಮ ಅವರಿಗೆ 1 ಲಕ್ಷ ರೂ. ಸಾಂತ್ವನ ನಿಧಿ ನೀಡಿ ಫಲ ಮಂತ್ರಾಕ್ಷತೆಯಿತ್ತು ಆಶೀರ್ವದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net