'ಪೇಸಿಎಂ' ಪೋಸ್ಟರ್ ಪ್ರಕರಣ: ಕಾಂಗ್ರೆಸ್​ನ ಐವರ ಬಂಧನ

New Project(29)
Published on

ಬೆಂಗಳೂರು: 'ಪೇಸಿಎಂ' ಪೋಸ್ಟರ್ ಪ್ರಕರಣ ಸಂಬಂಧ ಹೈಗ್ರೌಂಡ್ಸ್ ಠಾಣೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಕಾಂಗ್ರೆಸ್​ ಸೋಷಿಯಲ್ ಮೀಡಿಯಾ ಮುಖ್ಯಸ್ಥ ಬಿ.ಆರ್.ನಾಯ್ಡು, ಯೂತ್ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಕೋಆರ್ಡಿನೇಟರ್ ಗಗನ್, ಯೂತ್ ಕಾಂಗ್ರೆಸ್​ ಸೋಷಿಯಲ್ ಮೀಡಿಯಾ ಮುಖ್ಯಸ್ಥ ಪವನ್ ಸೇರಿ ಐವರು ಬಂಧಿತರು.

ಕಾಂಗ್ರೆಸ್​ ಪಕ್ಷ ಬುಧವಾರ ಬೆಳಗಿನ ಜಾವ ಬೆಂಗಳೂರು ನಗರದ ವಿವಿಧೆಡೆ ಪೇಟಿಎಂ ಪೋಸ್ಟರ್​ ಹೋಲುವ ರೀತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರ ಸಹಿತ "ಇಲ್ಲಿ 40 ಪರ್ಸೆಂಟ್​ ಸ್ವೀಕರಿಸಲಾಗುತ್ತದೆ'' ಎಂಬ ಒಕ್ಕಣೆಯೊಂದಿಗೆ ಕ್ಯೂಆರ್​ ಕೋಡ್​ ಇರುವ "ಪೇಸಿಎಂ'' ಹೆಸರಿನ ಪೋಸ್ಟರ್​ಗಳನ್ನು ಅಂಟಿಸಿತ್ತು.

ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟುಮಾಡಿರುವ ಪೇಸಿಎಂ ಪೋಸ್ಟರ್​ ಸಂಬಂಧ ಐದಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಸದಾಶಿವನಗರ, ಹೈಗ್ರೌಂಡ್ಸ್​, ಶೇಷಾದ್ರಿಪುರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಎಫ್​ಐಆರ್​ ದಾಖಲಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಇದನ್ನು ಖಂಡಿಸಿ ಕಾಂಗ್ರೆಸ್​ ತೀವ್ರ ಆಕ್ರೋಶ ಹೊರಹಾಕಿದೆ. ಪ್ರಜಾಪ್ರಭುತ್ವದ ಅಡಿ ನಾವು ಕೆಲಸ ಮಾಡ್ತಿದ್ದೇವೆ. 40% ಕಮಿಷನ್ ಸರ್ಕಾರ ಅಂತ ನಾವೆಲ್ಲ ಕ್ಯಾಂಪೇನ್ ಮಾಡಿದ್ದೇವೆ. ಬಿಜೆಪಿ ವಿರುದ್ದ ಮಾಧ್ಯಮದ ಸೋರ್ಸ್ ರೇಟ್ ಕಾರ್ಡ್ ಬಳಸಿ ನಾವು ಮಾಡಿದ್ದೇವೆ. ನಾಳೆ ಕಾಂಗ್ರೆಸ್​ನ ಎಲ್ಲ ಶಾಸಕರು ಮತ್ತು ವಿಧಾನ ಪರಿಸತ್​ ಸದಸ್ಯರುಗಳು ಒಟ್ಟಾಗಿ ಎಲ್ಲ ಸರ್ಕಾರಿ ಕಟ್ಟಡಗಳ ಮೇಲೆ ಪೇಸಿಎಂ ಪೋಸ್ಟರ್ ಅಂಟಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net