

ಚಾಮರಾಜನಗರ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ, ರಾಜ್ಯದ ಜನತೆಯನ್ನ ತಲ್ಲಣಗೊಳಿಸಿದ್ದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಕರೊನಾ ಸೋಂಕಿತರ ಸಾವಿನ ಪ್ರಕರಣದ ಡೆತ್ ಆಡಿಟ್ ರಿಪೋರ್ಟ್ ಬಹಿರಂಗಗೊಂಡಿದೆ.
ಮೇ 2ರಿಂದ 3ರವರೆಗೆ ಜಿಲ್ಲೆಯಲ್ಲಿ 24 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಈ ಪೈಕಿ 23 ಮಂದಿ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿದ್ದವರು. ಮತ್ತೊಬ್ಬರು ಆಸ್ಪತ್ರೆಗೆ ತಲುಪುವ ಮುನ್ನವೇ ಕೊನೆಯುಸಿರೆಳೆದಿದ್ದರು.
24 ಮಂದಿ ಪೈಕಿ 16 ಮಂದಿ ಕೋಮ್ ಆರ್ಬಿಡಿಟಿಯಿಂದ(ಇತರ ರೋಗ ಸಮಸ್ಯೆ ಹೊಂದಿದ್ದವರು) ಸತ್ತಿದ್ದಾರೆ. ಮೂವರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ. ಗುಂಡ್ಲುಪೇಟೆಯ ಮಂಜುಳಾ ಹೊಸೂರು, ಚಾಮರಾಜನಗರ ನಗರದ ಮೋಹನ್ ರಾಜ್ ಮೆಗಾವತ್, ಚಾಮರಾಜನಗರ ತಾಲೂಕಿನ ಮಹದೇವಸ್ವಾಮಿ ಯರಿಯೂರು ಎಂಬುವರು ಆಕ್ಸಿಜನ್ ಕೊರತೆಯಿಂದ ಸತ್ತಿದ್ದಾರೆ. ಉಳಿದವರು ಆಮ್ಲಜನಕ ಕೊರತೆ ಪರಿಣಾಮ ಐಫಾಕ್ಸಿಕ್ ಬ್ರೈನ್ ಇಂಜೂರಿಯಿಂದ ಮೃತಪಟ್ಟಿದ್ದಾರೆ ಎಂದು ಡೆತ್ ರಿಪೋರ್ಟ್ನಲ್ಲಿ ಉಲ್ಲೇಖವಾಗಿದೆ.