

ಚಾಮರಾಜನಗರ: ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಆಕ್ಸಿಜನ್ ಪೂರೈಕೆಯಾಗದೆ ಭಾನುವಾರ ತಡರಾತ್ರಿ 20ಕ್ಕೂ ಹೆಚ್ಚು ಕರೊನಾ ಸೋಂಕಿತರು ಮೃತಪಟ್ಟ ದುರ್ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ದುರ್ಘಟನೆಯಲ್ಲಿ 2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವಕನೂ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು.
ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೊಡ್ಡಹೊಮ್ಮ ಗ್ರಾಮದ ಯುವಕ ಸುರೇಂದ್ರ ಕೂಡ ಮೃತಪಟ್ಟಿದ್ದಾನೆ. ಇವರಿಗೆ ಎರಡು ತಿಂಗಳ ಹಿಂದಷ್ಟೆ ಚಾಮರಾಜನಗರ ತಾಲೂಕಿನ ಕೆರಹಳ್ಳಿ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿತ್ತು. ಇತ್ತೀಚಿಗೆ ಕರೊನಾ ಸೋಂಕು ತಗುಲಿತ್ತು. ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದ ಇವರು, ಭಾನುವಾರ ರಾತ್ರಿ 11 ಗಂಟೆಯಲ್ಲಿ ಸಂಬಂಧಿಕರಿಗೆ ವಿಡಿಯೋ ಕಾಲ್ ಮಾಡಿದ್ದ. ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ರೋಗಿಗಳು ನನ್ನ ಕಣ್ಮುಂದೆಯೇ ಸಾವನ್ನಪ್ಪುತ್ತಿದ್ದಾರೆ. ಈಗಾಗಲೇ ಕೆಲವರು ಸತ್ತಿದ್ದಾರೆ. ನನಗೂ ಆಕ್ಸಿಜನ್ ನೀಡಿಲ್ಲ ತೊಂದರೆಯಾಗುತ್ತಿದೆ... ಎಂದು ಹೇಳಿಕೊಂಡಿದ್ದ.
ಇದಾದ ಎರಡ್ಮೂರು ಸಾಸಿನಲ್ಲಿ ಆತನೂ ಪ್ರಾಣಬಿಟ್ಟಿದ್ದಾನೆ. ಸಾವಿನ ಸುದ್ದಿ ತಿಳಿದು ಆಸ್ಪತ್ರೆ ಬಳಿ ದೌಡಾಯಿಸಿದ ಸಂಬಂಧಿಕರು ಸುರೇಂದ್ರನನ್ನು ನೆನೆದು ಚೀರಾಡುತ್ತಿದ್ದರು. ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗ್ತಿಲ್ಲ ಎಂದು ಆತ ಕರೇ ಮಾಡಿದ್ದ. ಹೀಗೆ ಹೇಳಿ ಒಂದೆರಡು ಗಂಟೆಯೊಳಗೆ ಮೃತಪಟ್ಟಿದ್ದಾನೆ. ಆಕ್ಸಿಜನ್ ಸಿಲಿಂಡರ್ ಕೊರತೆಯಿಂದಲೇ ನಮ್ಮ ಮಗ ಸತ್ತಿದ್ದಾನೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ನವವಿವಾಹಿತ ಕೋವಿಡ್ಗೆ ಬಲಿಯಾಗಿರುವುದು ದುರಂತ.