

ಕಲಬುರಗಿ: ಹೊಸ ವರ್ಷಾಚರಣೆ ವೇಳೆ ಸೌಂಡ್ ಬಾಕ್ಸ್ ಬಳಕೆ ವಿಚಾರಕ್ಕೆ ಶುರುವಾದ ಗಲಾಟೆ ಯುವಕನೊಬ್ಬನ ಸಾವಲ್ಲಿ ಅಂತ್ಯ ಕಂಡಿದೆ.
ಕಲಬುರಗಿಯ ಭವಾನಿ ನಗರದ ಮಲ್ಲಿಕಾರ್ಜುನ್ (25) ಮೃತ ದುರ್ದೈವಿ. ಶುಕ್ರವಾರ ರಾತ್ರಿ ಮಲ್ಲಿಕಾರ್ಜುನ್ ತನ್ನ ಮನೆ ಮುಂದೆ ಕುಟುಂಬಸ್ಥರೊಂದಿಗೆ ಕೇಕ್ ಕತ್ತರಿಸಿ ಹೊಸ ವರ್ಷಾಚರಣೆ ಮಾಡುತ್ತಿದ್ದರು. ಆ ವೇಳೆ ಮಲ್ಲಿಕಾರ್ಜುನ್ ಸೌಂಡ್ ಬಾಕ್ಸ್ ಆನ್ ಮಾಡಿದ್ದ. ಸೌಂಡ್ ಆಫ್ ಮಾಡುವಂತೆ ಗ್ರಾಮದ ಕೆಲ ಯುವಕರು ಹೇಳಿದ್ದಾರೆ. 10 ಗಂಟೆ ನಂತರ ಸೌಂಡ್ ಬರುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ.
ಇದೇ ವಿಚಾರಕ್ಕೆ ಮಲ್ಲಿಕಾರ್ಜುನ್ ಮತ್ತು ಗ್ರಾಮದ ಕೆಲ ಯುವಕರ ನಡುವೆ ಗಲಾಟೆಯಾಗಿತ್ತು. ಈ ವೇಳೆ ಮಲ್ಲಿಕಾರ್ಜುನ್ ಚಾಕು ಇರಿತಕ್ಕೊಳಗಾಗಿದ್ದ. ಕೂಡಲೇ ಈತನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಲ್ಲಿಕಾರ್ಜುನ್ ಚಿಕಿತ್ಸೆ ಫಲಿಸದೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಕೊನೆಯುಸಿರೆಳೆದಿದ್ದಾನೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.