

ಶಿವಮೊಗ್ಗ: ಪ್ರಗತಿ ಸಾಧಿಸಲು ಹೊಸತನ ಬೇಕು. ಆ ಹೊಸತನದಿಂದ ಹೊಸ ಉತ್ಸಾಹ ಸಿಗುತ್ತದೆ. ಆ ಉತ್ಸಾಹ ಹೆಚ್ಚಿಸಿಕೊಂಡು ಪ್ರಗತಿಯ ದಿಕ್ಕಿನಲ್ಲಿ ಸಾಗಬೇಕಾದರೆ ಹಳೆಯದೂ ಜತೆಗಿರಬೇಕು. ಹಳೆಯ ಬೇರಿನಿಂದ ಚಿಗುರಿಗೆ ಶಕ್ತಿ ಬರುತ್ತದೆ ಎಂದು ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಂಯೋಜಕ ಶಂಕರಾನಂದ ಅಭಿಪ್ರಾಯಪಟ್ಟರು.
ಆರ್‌ಎಸ್‌ಎಸ್ ಶಿವಮೊಗ್ಗ ನಗರ ಘಟಕದಿಂದ ಭಾನುವಾರ ಏರ್ಪಡಿಸಿದ್ದ ಯುಗಾದಿ ಉತ್ಸವದಲ್ಲಿ ಬೌದ್ಧಿಕ್ ನೀಡಿದ ಅವರು, ಹೊಸತನದ ಸಾರ್ಥಕ ಉಪಯೋಗವಾಗಬೇಕು. ಯೋಗ್ಯ ದಿಕ್ಕಿನಲ್ಲಿ ಸಾಗಬೇಕಾದರೆ ಅನುಭವದ ಬೇರು ಬೇಕು. ಹೊಸ ಚಿಗುರೂ ಬೇಕು. ಇದು ಪ್ರಕೃತಿಯಲ್ಲೂ ಅನುಭವಕ್ಕೆ ಬರಬೇಕು. ಅಂತಹ ದಿನವನ್ನೇ ಹೊಸ ವರ್ಷವಾಗಿ ಆಚರಿಸಬೇಕು ಎಂದರು.
ಕಹಿ ಮತ್ತು ಸಿಹಿಯನ್ನು ಸಮಾನವಾಗಿ ನೋಡುವುದು, ಅವೆರಡನ್ನೂ ಸಮಾನವಾಗಿ ಸ್ವೀಕರಿಸುವ ಮಾನಸಿಕತೆ ನಮ್ಮಲ್ಲಿ ಬೆಳೆಯಬೇಕು. ಕಹಿ ಉಂಡಾಗ ಮಾತ್ರ ಸಿಹಿಯನ್ನು ಸ್ವೀಕರಿಸುವ ಅಧಿಕಾರ ಸಿಗುತ್ತದೆ. ಎರಡೂ ಸಮಾನವಾಗಿ ಸ್ವೀಕರಿಸುವ ಮಾನಸಿಕತೆ ಬೆಳೆದಾಗ ಜೀವನದಲ್ಲಿ ಸಮತ್ವ ಬರುತ್ತದೆ ಎಂದು ತಿಳಿಸಿದರು.
ಸಂಘ ಸ್ಥಾಪಿಸಿದ್ದ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರ ದೂರದೃಷ್ಟಿ ಅತ್ಯುತ್ತಮವಾಗಿತ್ತು. ವಂದೇ ಮಾತರಂ ಹೇಳಲೇಬಾರದು ಎಂದು ಆದೇಶವಿದ್ದಾಗ ಅವರು ಪುಟ್ಟ ವಯಸ್ಸಿನಲ್ಲಿ ಆದೇಶವನ್ನು ಉಲ್ಲಂಘಿಸಿ ವಂದೇ ಮಾತರಂ ಹೇಳುವ ಸಾಹಸ ಮಾಡಿದ್ದರು ಎಂದು ತಿಳಿಸಿದರು.
ಮೊದಲು ಸ್ವಾತಂತ್ರೃ ಪ್ರಾಪ್ತಿಯೋ ಅಥವಾ ಸಮಾಜ ಸುಧಾರಣೆಯೋ? ಎಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಡಾಕ್ಟರ್ ಜೀ ಈ ಚರ್ಚೆಯ ಗೋಜಿಗೆ ಹೋಗಲಿಲ್ಲ. ಎರಡನ್ನೂ ಒಟ್ಟೊಟ್ಟಿಗೇ ಶುರು ಮಾಡಿದರು. ಅವರ ಮನಸ್ಸಿನಲ್ಲಿ ಇದ್ದ ಚಿಂತನೆ ಸ್ವಾತಂತ್ರೃ ಗಳಿಸಬೇಕು ಎಂಬುದಾಗಿತ್ತು. ನಾವು ಸ್ವಾತಂತ್ರೃ ಕಳೆದುಕೊಂಡಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಪಡೆದುಕೊಳ್ಳುವಲ್ಲಿ ಅವರು ಸಫಲರಾದರು ಎಂದು ಹೇಳಿದರು.
ಜಿಲ್ಲಾ ಸಂಘಚಾಲಕ ಬಿ.ಎ.ರಂಗನಾಥ, ನಗರ ಸಂಘ ಚಾಲಕ ಲೋಕೇಶ್ವರ ರಾವ್ ಕಾಳೆ ಉಪಸ್ಥಿತರಿದ್ದರು. ವೈದ್ಯ ಡಾ.ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ನಗರದ 39 ಶಾಖೆಯ 650 ಸ್ವಯಂಸೇವಕರು ಯುಗಾದಿ ಉತ್ಸವದಲ್ಲಿ ಭಾಗವಹಿಸಿದ್ದರು.