

ಬೆಂಗಳೂರು: ಹೊಸ ರೇಷನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ ಚಾತಕಪಕ್ಷಿಯಂತೆ ಕಾಯುತ್ತಿರುವ ಅರ್ಜಿದಾರರಿಗೆ ಖುಷಿ ಸುದ್ದಿ ಇಲ್ಲಿದೆ. ಬಾಕಿ ಅರ್ಜಿಗಳ ವಿಲೇವಾರಿಗೆ ಒಂದೆರೆಡು ದಿನಗಳಲ್ಲಿ ಆಹಾರ ಇಲಾಖೆ ಆದೇಶ ಹೊರಡಿಸಲಿದೆ.
ವಿಲೇವಾರಿಗೆ ಅನುಮತಿ ನೀಡುವಂತೆ ಇಲಾಖೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಸಲ್ಲಿಸಿದ್ದ ಮನವಿಯನ್ನು ಸೋಮವಾರ(ನ.1) ಪುರಸ್ಕರಿಸಿ ಸರ್ಕಾರ ಅನುಮೋದನೆ ನೀಡಿದೆ. ಮಂಗಳವಾರ (ನ.2) ಅಧಿಕೃತವಾಗಿ ಸರ್ಕಾರದಿಂದ ಮಾಹಿತಿ ಬರಲಿದೆ. ಬಳಿಕ ರಾಜ್ಯಾದ್ಯಂತ ಬಾಕಿ ಉಳಿದಿರುವ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ಇಲಾಖೆ ಆಯುಕ್ತೆ ಶಮ್ಲಾ ಇಕ್ಬಾಲ್ 'ವಿಜಯವಾಣಿ'ಗೆ ತಿಳಿಸಿದ್ದಾರೆ.
2017-18ರಿಂದ 2020-21ರವರೆಗೆ ರಾಜ್ಯಾದ್ಯಂತ ಬಿಪಿಎಲ್ ಕಾರ್ಡ್‌ಗಾಗಿ ಸಲ್ಲಿಕೆಯಾಗಿರುವ 39,02,745 ಅರ್ಜಿಗಳ ಪೈಕಿ 34,97,529 ಅರ್ಜಿಗಳ ವಿಲೇಯಾಗಿದ್ದು, 4,05,216 ಅರ್ಜಿಗಳು ಬಾಕಿ ಉಳಿದಿವೆ. ಕರೊನಾ ಹಿನ್ನೆಲೆಯಲ್ಲಿ 2 ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಮಂಜೂರು ಮಾಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಅಭ್ಯರ್ಥಿಗಳು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಿದ್ದಾರೆ.