

ಚೀನಾದ ಭಾರತವಿರೋಧಿ ಕಾರ್ಯತಂತ್ರಗಳು ಯಾವಾಗಲೂ ಒಂದಿಲ್ಲೊಂದು ರೂಪದಲ್ಲಿ ದೇಶದ ಗಮನಕ್ಕೆ ಬರುತ್ತಿರುತ್ತವೆ. ಪಾಕಿಸ್ತಾನಕ್ಕೆ ಪರೋಕ್ಷ ಬೆಂಬಲ ನೀಡುವುದು, ಭಾರತದ ಈಶಾನ್ಯ ರಾಜ್ಯಗಳ ಗಡಿಯಲ್ಲಿ ರಸ್ತೆ-ಸೇತುವೆ ಯೋಜನೆಗಳ ಮೂಲಕ ಒತ್ತಡ ಸೃಷ್ಟಿಸುವುದು ಮತ್ತು ಈಗ ಹೊಸ ತಂತ್ರವಾಗಿ ರೇರ್ ಅರ್ಥ್ ಮೆಟಲ್ಸ್ನಂತಹ ಅತ್ಯಗತ್ಯ ವಸ್ತುಗಳ ಪೂರೈಕೆಯನ್ನು ನಿಲ್ಲಿಸುವುದು- ಇವೆಲ್ಲವೂ ಚೀನಾದ ಕಿರುಕುಳದ ಒಂದೊಂದು ರೂಪಗಳಾಗಿವೆ.
ಇದೀಗ, ಭಾರತದಲ್ಲಿ ಐಫೋನ್ ತಯಾರಿಕೆಗೆ ಸಂಬಂಧಿಸಿದ 300 ಚೀನೀ ತಂತ್ರಜ್ಞರನ್ನು ವಾಪಸ್ ಕರೆಸಿಕೊಂಡಿರುವ ಚೀನಾದ ಕ್ರಮವು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿಸುವ ಕೇಂದ್ರ ಸರ್ಕಾರದ ಆಕಾಂಕ್ಷೆಗೆ ಅಡ್ಡಿಯಾಗುವ ಉದ್ದೇಶವನ್ನು ಸ್ಪಷ್ಟವಾಗಿ ತೋರಿಸುತ್ತದೆ.
ರೇರ್ ಅರ್ಥ್ ಮೆಟಲ್ಸ್ ಮತ್ತು ಮ್ಯಾಗ್ನೆಟ್ಸ್ನಂತಹ ಕಚ್ಚಾ ವಸ್ತುಗಳು ವಾಹನೋದ್ಯಮ, ಎಲೆಕ್ಟ್ರಾನಿಕ್ಸ್ ಮತ್ತು ಇತರ ತಂತ್ರಜ್ಞಾನ-ಆಧಾರಿತ ಕೈಗಾರಿಕೆಗಳಿಗೆ ಜೀವನಾಡಿಯಾಗಿವೆ. ಈ ವಸ್ತುಗಳ ಪೂರೈಕೆಯನ್ನು ಚೀನಾ ಉದ್ದೇಶಪೂರ್ವಕವಾಗಿ ನಿಲ್ಲಿಸಿರುವುದು ಭಾರತದ ಉತ್ಪಾದನಾ ಸಾಮರ್ಥ್ಯವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿದೆ. ಇದೇ ವೇಳೆ, ಚೀನೀ ತಂತ್ರಜ್ಞರನ್ನು ವಾಪಸ್ ಕರೆಸಿಕೊಂಡಿರುವುದು ಭಾರತವನ್ನು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರವಾಗಿ ಮಾರ್ಪಡಿಸುವ ಯತ್ನಕ್ಕೆ ನೀಡಿರುವ ಪೆಟ್ಟು ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದು ಕೇವಲ ಆರ್ಥಿಕ ಸವಾಲು ಮಾತ್ರವಲ್ಲ, ಭಾರತದ ಆತ್ಮಗೌರವವನ್ನು ಕೆಣಕಿದಂತಾಗಿದೆ. ಕೇಂದ್ರ ಸರ್ಕಾರ ಈಗ ತನ್ನ ಕಾರ್ಯತಂತ್ರವನ್ನು ಎಚ್ಚರಿಕೆಯಿಂದ ರೂಪಿಸಬೇಕಾಗಿದೆ. ಮೊದಲನೆಯದಾಗಿ, ರೇರ್ ಅರ್ಥ್ ಮೆಟಲ್ಸ್ನಂತಹ ಕಚ್ಚಾ ವಸ್ತುಗಳಿಗೆ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ದೇಶೀಯ ಗಣಿಗಾರಿಕೆ ಮತ್ತು ಸಂಸ್ಕರಣಾ ಸಾಮರ್ಥ್ಯವನ್ನು ವೃದ್ಧಿಗೊಳಿಸಬೇಕು. ಆಸ್ಟ್ರೇಲಿಯಾ, ಕೆನಡಾ ಮತ್ತು ಆಫ್ರಿಕಾದಂತಹ ಪರ್ಯಾಯ ಪೂರೈಕೆದಾರರೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವುದು ತಕ್ಷಣದ ಅಗತ್ಯವಾಗಿದೆ.
ಎರಡನೆಯದಾಗಿ, ದೇಶೀಯ ತಂತ್ರಜ್ಞರಿಗೆ ತರಬೇತಿ ನೀಡಿ, ಚೀನೀ ತಂತ್ರಜ್ಞರ ಅಗತ್ಯವನ್ನು ಕಡಿಮೆ ಮಾಡಿಕೊಳ್ಳಬೇಕು. ಆತ್ಮನಿರ್ಭರ ಭಾರತ ಯೋಜನೆಯಡಿ ಈಗಾಗಲೇ ಆರಂಭವಾಗಿರುವ ಉತ್ಪಾದನಾ ಉಪಕ್ರಮಗಳಿಗೂ ಇದು ಬಲವನ್ನು ತುಂಬಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ, ಚೀನಾದ ಈ ಕ್ರಮಗಳನ್ನು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಮತ್ತಿತರ ವೇದಿಕೆಗಳಲ್ಲಿ ಪ್ರಸ್ತಾಪಿಸಿ, ಅದರ ಅನೈತಿಕ ವ್ಯಾಪಾರ ಅಭ್ಯಾಸಗಳನ್ನು ಬಯಲು ಮಾಡಬೇಕು. ಇತ್ತೀಚೆಗೆ ಅಮೆರಿಕದ ಆಟೋಮೊಬೈಲ್ ಸುಂಕಗಳ ವಿರುದ್ಧ ಭಾರತ ಪ್ರತೀಕಾರದ ಸುಂಕಗಳನ್ನು ಪ್ರಸ್ತಾಪಿಸಿರುವಂತೆ, ಚೀನಾದ ರೇರ್ ಅರ್ಥ್ ಮೆಟಲ್ಸ್ ಪೂರೈಕೆ ನಿರಾಕರಣೆಗೆ ತಕ್ಕ ಪ್ರತಿಕ್ರಿಯೆ ನೀಡಬೇಕು.
ಚೀನಾದಿಂದ ಆಮದಾಗುವ ಕೆಲವು ಉತ್ಪನ್ನಗಳ ಮೇಲೆ ಅನಿರೀಕ್ಷಿತ ಸುಂಕಗಳನ್ನು ವಿಧಿಸುವ ಮೂಲಕ ಒತ್ತಡ ಸೃಷ್ಟಿಸಬೇಕು. ಚೀನಾದ ಕುತಂತ್ರವು ಭಾರತಕ್ಕೆ ಸ್ವಾವಲಂಬನೆ ಸಾಧಿಸಲು ಅವಕಾಶವೂ ಹೌದು. ಈ ಸಂದರ್ಭದಲ್ಲಿ, ಭಾರತ ತನ್ನ ಆರ್ಥಿಕ ಮತ್ತು ರಾಜಕೀಯ ಶಕ್ತಿ ಬಳಸಿಕೊಂಡು, ಚೀನಾಕ್ಕೆ ತಕ್ಕ ಉತ್ತರ ನೀಡಬೇಕು. ದೇಶೀಯ ಉತ್ಪಾದನೆ ಬಲಪಡಿಸುವುದು, ವಿದೇಶಿ ಸಹಕಾರ ಹೆಚ್ಚಿಸುವುದು ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚೀನಾದ ಕ್ರಮಗಳನ್ನು ಖಂಡಿಸುವುದು... ಈ 3 ಸ್ತರಗಳ ಕಾರ್ಯತಂತ್ರ ಭಾರತವನ್ನು ಈ ಸವಾಲಿನಿಂದ ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮುವಂತೆ ಮಾಡಬಹುದು.