ಪ್ರದೂಷಣೆ ತಗ್ಗಿಸಲು ಹೊಸ ಪರಿಕಲ್ಪನೆ

ಬಜೆಟ್​
Published on

ಬೆಂಗಳೂರು: ಹವಾಮಾನ ಬದಲಾವಣೆ ಜೀವ ಸಂಕುಲದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಜಾಗತಿಕ ತಾಪಮಾನ ಹಲವು ಒತ್ತಡ ಸೃಷ್ಠಿಸುತ್ತಿದೆ. ಇದರ ಗಂಭೀರ ಪರಿಣಾಮಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿನೂತನ ಹೆಜ್ಜೆ ಇಟ್ಟಿದೆ.

ವಾತಾವರಣದಲ್ಲಿ ಸೇರ್ಪಡೆಯಾಗುವ ಕಾರ್ಬನ್ ಡೈ ಆಕೈಡ್ಸ್​ ಹೊರಸೂಸುವಿಕೆ ಕಡಿಮೆ ಮಾಡಲು ಹೊಸ ಮಾರ್ಗ ಹುಡುಕಿದೆ. ರೈತರಿಗೆ ಲಾಭವೂ ಆಗಬೇಕು. ಪರಿಸರ ಪ್ರದೂಷಣೆಯನ್ನೂ ತಗ್ಗಿಸುವ ನಿಟ್ಟಿನಲ್ಲಿ ಕಾರ್ಬನ್ ಕ್ರೆಡಿಟ್ ಪರಿಕಲ್ಪನೆ ಘೋಷಿಸಲಾಗಿದೆ. ಕೃಷಿ, ತೋಟಗಾರಿಕೆ, ಅರಣ್ಯ ಬೆಳೆಗಳಲ್ಲಿ ಹೆಚ್ಚು ಇಂಗಾಲ ಹಿಡಿದಿಟ್ಟುಕೊಳ್ಳುವ ಬೆಳೆಗಳನ್ನು ಗುರುತಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾರ್ಬನ್ ಕ್ರೆಡಿಟ್ ರೂಪದಲ್ಲಿ ಮಾರಾಟ ಮಾಡುವ ಮೂಲಕ ರೈತರು ಹೆಚ್ಚಿನ ಆದಾಯ ಗಳಿಸಲು ಅನುಕೂಲವಾಗುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ಕೈಗಾರಿಕೆಗಳು, ಕಂಪನಿಗಳು, ವ್ಯಕ್ತಿಗಳು ಹಾಗೂ ಸರ್ಕಾರಗಳು ಸಸಿ ನೆಡಲು ಅಥವಾ ಅರಣ್ಯ ಸಂರಕ್ಷಿಸಲು ಯೋಜನೆ ಸಹಕಾರಿಯಾಗಿದೆ. ಇಂಗಾಲದ ಹೊರಸೂಸುವಿಕೆ ತಡೆಯಲು ಇದು ಮಹತ್ವದ ಮೈಲಿಗಲ್ಲಾಗಿದೆ. ರೈತರು ಬೆಳೆಯುವ ಬೆಳೆಗಳಿಂದ ಹೊರಸೂಸುವ ಕಾರ್ಬನ್ ಡೈ

ಆಕೈಡ್ಸ್​ ಪ್ರಮಾಣ ಕಡಿಮೆ ಮಾಡಬೇಕು. ಒಬ್ಬ ರೈತನ ಜಮೀನಿನಿಂದ 5 ಟನ್ ಕಾರ್ಬನ್ ಡೈ ಆಕೈಡ್ಸ್​ ಹೊರ ಸೂಸಿದರೆ ಅದನ್ನು ಕೃಷಿ, ಅರಣ್ಯ, ತೋಟಗಾರಿಕೆ ಬೆಳೆಗಳ ಮೂಲಕ 1 ಟನ್ ಕಡಿಮೆ ಮಾಡಿದರೆ ಅದನ್ನು ಒಂದು ಕಾರ್ಬನ್ ಕ್ರೆಡಿಟ್ ಗಳಿಕೆ ಎಂದು ಕರೆಯಲಾಗುತ್ತದೆ.

ಜಾಗತಿಕ ವೇದಿಕೆ ಕಲ್ಪಿಸಲು ಸಜ್ಜು: ಕೈಗಾರಿಕೆಗಳು ಹೊಸ ಹೊಸ ತಂತ್ರಜ್ಞಾನ ಬಳಸಿಯೂ ಹೊರಸೂಸುವ ಕಾರ್ಬನ್ ಡೈ ಆಕೈ ್ಸ್ ಕಡಿಮೆ ಮಾಡಲು ಸಾಧ್ಯವಾಗದೇ ಇದ್ದರೆ ಅಂತಹ ಕೈಗಾರಿಕೆಗಳು ರೈತರಿಂದ ಕಾರ್ಬನ್ ಕ್ರೆಡಿಟ್​ಗಳನ್ನು ಖರೀದಿಸುತ್ತವೆ. ಇಂಗಾಲ ಹಿಡಿದಿಕೊಟ್ಟುಕೊಳ್ಳುವ ಬೆಳೆ ಬೆಳೆಯುವ ರೈತರಿಗೆ ಕಂಪನಿಗಳು ಹಣ ನೀಡುತ್ತವೆ. ಇದರಿಂದ ಪ್ರದೂಷಣೆಯೂ ತಪ್ಪುತ್ತದೆ. ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಕಡಿಮೆಯಾಗುತ್ತದೆ. ಈ ರೀತಿ ಒಪ್ಪಂದದ ಮೂಲಕ ಬೆಳೆ ಬೆಳೆಯುವ ರೈತರಿಗೆ ಪರ್ಯಾಯ ಆದಾಯ ಮೂಲವೂ ದೊರೆಯುತ್ತದೆ. ಈ ಮಾರಾಟಕ್ಕೊಂದು ಅಂತಾರಾಷ್ಟ್ರೀಯ ವೇದಿಕೆ ಕಲ್ಪಿಸಲು ಸರ್ಕಾರ ಸಜ್ಜಾಗಿದೆ. ಅದನ್ನು ಬಜೆಟ್​ನಲ್ಲಿ ಘೋಷಿಸಲಾಗಿದೆ.

ರೈತರು ಕಾರ್ಬನ್ ಕ್ರೆಟಿಟ್ ಸಂಸ್ಥೆಗಳಲ್ಲಿ ನೋಂದಾಯಿಸಿಕೊಂಡು ವ್ಯವಹರಿಸಬೇಕಾಗುತ್ತದೆ. ಈ ಯೋಜನೆಯ ರೂಪುರೇಷೆ ಆರಂಭಿಕ ಹಂತದಲ್ಲಿದೆ. ಈಗಾಗಲೇ ಹಲವು ರೈತರು ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಖಾಸಗಿ ಕಂಪನಿಗಳ ಮೂಲಕ ಹೆಸರು ನೋಂದಾಯಿಸಿಕೊಂಡು ಸಣ್ಣಮಟ್ಟದ ವರಮಾನ ಪಡೆಯುತ್ತಿದ್ದಾರೆ. ಸರ್ಕಾರವೇ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವುದರಿಂದ ಕಾರ್ಬನ್ ಕ್ರೆಡಿಟ್​ಗೊಂದು ಜಾಗತಿಕ ವೇದಿಕೆ ಲಭ್ಯವಾಗಲಿದೆ. ಇದು ರೈತರ ಆದಾಯ ಹೆಚ್ಚಿಸಲು ಹಾಗೂ ಜಾಗತಿಕ ತಾಪಮಾನ ತಗ್ಗಿಸುವ ನಿಟ್ಟಿನಲ್ಲಿ ಮೈಲಿಗಲ್ಲಾಗಿದೆ. ಇದು ವಿನೂತನ ಪ್ರಯತ್ನವಾಗಿದೆ.

ಪರಿಸರ ಸಂರಕ್ಷಿಸುವ ಪ್ರಸ್ತುತ ಪ್ರತಿಜ್ಞೆ : ಕೆಲವು ದುರ್ಬಲ ಪರಿಸರ ವ್ಯವಸ್ಥೆಗಳು ಮತ್ತು ಸಮುದಾಯಗಳನ್ನು ರಕ್ಷಿಸಲು ತುರ್ತು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಪರಿಸರ ಸಂರಕ್ಷಿಸುವ ಪ್ರಸ್ತುತ ಪ್ರತಿಜ್ಞೆಗಳು ಮತ್ತು ಕ್ರಮಗಳು ಕಡಿಮೆಯಾಗುತ್ತಿವೆ ಮತ್ತು ಹವಾಮಾನ ಬದಲಾವಣೆ ನಿಯಂತ್ರಣ ದಲ್ಲಿಡುವ ಕ್ರಮ ಕುಗ್ಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಯಾರಿಸ್ ಒಪ್ಪಂದ ಮತ್ತು ಸುಸ್ಥಿರ ಅಭಿವೃದ್ಧಿಗೆ ಅಂತರಾಷ್ಟ್ರೀಯವಾಗಿ ಅನುಮೋದಿಸಲಾದ ಗುರಿ ತಲುಪಲು ಮಹತ್ವಾಕಾಂಕ್ಷೆ ಹೆಚ್ಚಿಸಬೇಕಿದೆ. ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡಲು ಹವಾಮಾನ ಹಣಕಾಸನ್ನು ಸಜ್ಜುಗೊಳಿಸಬೇಕಾಗಿದೆ. ಇದರಿಂದ ಸಮುದಾಯಗಳಸಬಲೀಕರಣ, ಪರಿಸರ ವ್ಯವಸ್ಥೆಗಳ ರಕ್ಷಣೆ, ಅರಣ್ಯ ಪುನಃಸ್ಥಾಪನೆ ಅಥವಾ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡಬಹುದಾಗಿದೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net