ಏನಿದು 'ಎಡಗೈಯೇ ಅಪಘಾತಕ್ಕೆ ಕಾರಣ'?; ಇಲ್ಲಿದೆ ಕುತೂಹಲಕಾರಿ ಸಂಗತಿ!

Untitled design (42)
Published on

ಬೆಂಗಳೂರು: ಎಡಗೈ ಬಳಸುವವರ ಕಥೆಯಾಧಾರಿತ 'ಎಡಗೈಯೇ ಅಪಘಾತಕ್ಕೆ ಕಾರಣ' ಎಂಬ ಸಿನಿಮಾ ಕನ್ನಡದಲ್ಲಿ ತಯಾರಾಗಿರುವುದು ಇದೀಗ ಹಲವರ ಕುತೂಹಲಕ್ಕೆ ಕಾರಣವಾಗಿದ್ದು, ಯುವ ನಿರ್ದೇಶಕ ಸಮರ್ಥ್‌ ಕಡಕೋಳ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ದೀಪಾವಳಿಯ ಅಂಗವಾಗಿ ಭಾನುವಾರ ಹೊಸ ಪೋಸ್ಟರ್ ಬಿಡುಗಡೆಗೊಂಡಿದೆ.

ಟೇಬಲ್ ಹಿಂಬದಿಯಲ್ಲಿ ಬಚ್ಚಿಟ್ಟುಕೊಂಡು ಕುಳಿತಿರುವ ನಾಯಕ ಹಾಗೂ ನಾಯಕಿ. ಅವರ ಬೆನ್ನಿಂದೆ ಓರ್ವ ವ್ಯಕ್ತಿ ನಿಂತಿದ್ದಾರೆ. ಅವರು ಯಾರು ಎಂಬುದನ್ನು ರಿವೀಲ್ ಮಾಡದೇ ಚಿತ್ರತಂಡ ಕುತೂಹಲ ಕಾಯ್ದುಕೊಂಡಿದೆ. ಚಿತ್ರಕ್ಕೆ ಸಮರ್ಥ್ ಬಿ. ಕಡಕೊಳ್ ಆಕ್ಷನ್ ಕಟ್ ಹೇಳಿದ್ದು, ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್-ಥ್ರಿಲ್ಲರ್ ವಿಷಯ ಒಳಗೊಂಡ ಕಥಾಹಂದರ ಈ ಸಿನಿಮಾದಲ್ಲಿದೆ.

ಹೆಸರೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರವಾಗಿದ್ದು, ಚಿತ್ರದಲ್ಲಿ ದಿಗಂತ್​ಗೆ ಜೋಡಿಯಾಗಿ ನವ ನಟಿ ಧನು ಹರ್ಷ ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾವನ್ನು ಹೈಫನ್ ಪಿಕ್ಚರ್ಸ್ ಮತ್ತು ಗುರುದತ್ ಗಾಣಿಗ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅಭಿಮನ್ಯು ಸದಾನಂದ್ ಛಾಯಾಗ್ರಹಣವಿದ್ದು, ರಾಹುಲ್ ವಿ. ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆಯಿದೆ. ಸದ್ಯ ಒಂದಷ್ಟು ಪೋಸ್ಟರ್​ಗಳ ಮೂಲಕ ಗಮನಸೆಳೆದಿರುವ ಸಿನಿಮಾ ಶೀಘ್ರದಲ್ಲೇ ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲಿದೆ ಎಂದು ಚಿತ್ರತಂಡ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net