ಪ್ರಧಾನ ಸೇವಕನ ಹ್ಯಾಟ್ರಿಕ್ ಪ್ರಮಾಣ! ಮೋದಿ 3.0 ಹೊಸ ಅಧ್ಯಾಯ

Untitled design (4)
Published on

ಮಗದೊಮ್ಮೆ ಮೋದಿ,  ರಾಷ್ಟ್ರ ರಾಜಧಾನಿಯನ್ನು ವೈಮಾನಿಕ ಹಾರಾಟ ನಿಷೇಧಿತ ವಲಯ ಎಂದು ಘೋಷಣೆ.  ಸತತ ಮೂರು ಅವಧಿಗೆ ಪ್ರಧಾನಿ ಆದ ನೆಹರು ದಾಖಲೆ ಸಮ.

ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಭಾನುವಾರ ಸಂಜೆ 7.15ಕ್ಕೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಸಾಧನೆಯನ್ನು ಸರಿಗಟ್ಟಲಿದ್ದಾರೆ. ದೇಶ, ವಿದೇಶದ ಸುಮಾರು 8 ಸಾವಿರ ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.

ಪ್ರಧಾನಿ ಮೋದಿ ಜತೆಗೆ ಅಮಿತ್ ಷಾ, ರಾಜನಾಥ ಸಿಂಗ್, ಎಸ್. ಜೈಶಂಕರ್ ಇನ್ನಿತರ ಪ್ರಮುಖ ನಾಯಕರು ಪ್ರಮಾಣ ಸ್ವೀಕರಿಸುವ ಮೂಲಕ ಹೊಸ ಸಚಿವ ಸಂಪುಟ ಸೇರುವುದು ಖಚಿತವಾಗಿದೆ. ಇವರ ಜತೆಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್, ಬಸವರಾಜ ಬೊಮ್ಮಾಯಿ, ಮನೋಹರ್ ಲಾಲ್ ಖಟ್ಟರ್, ಸರ್ಬಾನಂದ ಸೋನೋವಾಲ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕರ್ನಾಟಕದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಗೆ ಸಚಿವ ಸ್ಥಾನ ಸಿಗುವುದು ಈಗಾಗಲೇ ಖಚಿತವಾಗಿದೆ. ಟಿಡಿಪಿಯ ರಾಮ್ ಮೋಹನ್ ನಾಯ್ಡು, ಲಲನ್ ಸಿಂಗ್, ಸಂಜಯ್ ಝಾ, ಜೆಡಿಯುನ ರಾಮನಾಥ್ ಠಾಕೂರ್, ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಅವರು ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಟಿಡಿಪಿಗೆ 4, ಜೆಡಿಯುಗೆ 2 ಸ್ಥಾನ ಸಿಗುವ ನಿರೀಕ್ಷೆ ಇದೆ.

ಖಾತೆ ಲೆಕ್ಕಾಚಾರ

  • ಗೃಹ, ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರದಂಥ ಮಹತ್ವದ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಳ್ಳಲು ಬಿಜೆಪಿ ಕಸರತ್ತು
  • ಮಿತ್ರಪಕ್ಷಗಳಿಗೆ 5-8 ಸಂಪುಟ ಸ್ಥಾನ ಸಾಧ್ಯತೆ
  • ಟಿಡಿಪಿಗೆ 4, ಜೆಡಿಯು 2 ಸ್ಥಾನ ಖಚಿತ
  • ಮುಂಬರುವ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಹಾರಾಷ್ಟ್ರ, ಹರಿಯಾಣ, ಬಿಹಾರ, ದೆಹಲಿ ಇನ್ನಿತರ ರಾಜ್ಯಗಳಿಗೆ ಕೆಲ ಸ್ಥಾನ ನೀಡಿಕೆ ಸಾಧ್ಯತೆ

ರಾಜ್ಯದಿಂದ ಯಾರು ಆಕಾಂಕ್ಷಿಗಳು?

  • ಎಚ್.ಡಿ. ಕುಮಾರಸ್ವಾಮಿ
  • ಬಸವರಾಜ ಬೊಮ್ಮಾಯಿ
  • ಜಗದೀಶ ಶೆಟ್ಟರ್
  • ಗೋವಿಂದ ಕಾರಜೋಳ
  • ಪ್ರಲ್ಹಾದ ಜೋಶಿ
  • ಡಾ. ಸಿ.ಎನ್. ಮಂಜುನಾಥ
  • ಬಿ.ವೈ. ರಾಘವೇಂದ್ರ
  • ಡಾ. ಕೆ. ಸುಧಾಕರ್
  • ಸಂಜೆ 7.5ಕ್ಕೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ, ನೂತನ ಸಚಿವ ಸಂಪುಟದ ಸದಸ್ಯರೊಂದಿಗೆ ಪ್ರಮಾಣ ವಚನ ಸ್ವೀಕಾರ
  • ಜವಾಹರಲಾಲ್ ನೆಹರು ನಂತರ ಸತತ ಮೂರು ಅವಧಿಗೆ ಪ್ರಧಾನಿಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ
  • ರಾಷ್ಟ್ರಪತಿ ಭವನದ ಸುತ್ತ ಮೂರು ಹಂತದ ಭದ್ರತಾ ವ್ಯವಸ್ಥೆ ಜಾರಿಗೆ. ಪ್ರಮುಖ ಪ್ರದೇಶಗಳಲ್ಲಿ ಕಮಾಂಡೋಗಳ ನಿಯೋಜನೆ.
  • ಡ್ರೋನ್​ಗಳು, ಪ್ಯಾರಾಗ್ಲೈಡರ್​ಗಳು, ರಿಮೋಟ್ ಕಂಟ್ರೋಲ್ಡ್ ಏರ್​ಪ್ಲೇನ್ ಮತ್ತು ಬಲೂನ್​ಗಳಂತಹ ಹಾರುವ ವಸ್ತುಗಳಿಗೆ ನಿಷೇಧ
  • ನೆರೆಯ ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ, ಮಾರಿಷಸ್ ಮತ್ತು ಇತರ ದೇಶಗಳ ಮುಖ್ಯಸ್ಥರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ.
  • ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡುವ ಕಾರ್ವಿುಕರು, ನೈರ್ಮಲ್ಯ ಕಾರ್ಯಕರ್ತರು ಮತ್ತು ತೃತೀಯಲಿಂಗಿ ಸಮುದಾಯದ ವ್ಯಕ್ತಿಗಳನ್ನು ಸಹ ಪ್ರಮಾಣವಚನ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ.
  • ವಂದೇ ಭಾರತ್, ಮೆಟ್ರೋ ರೈಲು ಯೋಜನೆಯಲ್ಲಿ ಕೆಲಸ ಮಾಡುವ ಕಾರ್ವಿುಕರೂ ಇರಲಿದ್ದಾರೆ. ಇವರು ‘ಅಭಿವೃದ್ಧಿ ಹೊಂದಿದ ಭಾರತದ ರಾಯ ಭಾರಿಗಳು’ ಎಂದು ಸರ್ಕಾರ ಬಣ್ಣಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net