ಕುತ್ತಿಗೆಗೆ ಈ ಔಷಧ ಹಚ್ಚಿದ್ರೆ ಮಕ್ಕಳಾಗುತ್ತೆ... ಸಂತಾನಭಾಗ್ಯ ಕರುಣಿಸುವ ನೆಪದಲ್ಲಿ ಅಂಗನವಾಡಿ ಕಾರ್ಯಕರ್ತೆಗೆ ವಂಚನೆ

gold chain
Published on

ಶಿವಮೊಗ್ಗ: ಸಂತಾನ ಇಲ್ಲದೆ ಕೊರಗುತ್ತಿರುವವರನ್ನೇ ಬಂಡವಾಳ ಮಾಡಿಕೊಂಡ ಖದೀಮರು ಮಹಿಳೆಯೊಬ್ಬರ ಹೇಗೆಲ್ಲಾ ಯಾಮಾರಿಸಿದ್ದಾರೆ ಗೊತ್ತಾ? ಮಕ್ಕಳಾಗಬೇಕಾದರೆ ಕುತ್ತಿಗೆಗೆ ಔಷಧ ಹಚ್ಚಬೇಕು. ಮಾಂಗಲ್ಯ ಸರ ತೆಗೆದಿಡಿ ಎಂದು ಮಹಿಳೆಯನ್ನು ನಂಬಿಸಿ ಸರವನ್ನು ಲಪಟಾಯಿಸಿಕೊಂಡು ಪರಾರಿಯಾಗಿದ್ದಾರೆ.

ಇಂತಹ ಘಟನೆ ಶಿವಮೊಗ್ಗದ ವೆಂಕಟೇಶ್ವರ ನಗರದಲ್ಲಿ ಸೋಮವಾರ ಸಂಭವಿಸಿದೆ. ವಂಚನೆಗೆ ಒಳಗಾದವರು ಆಶಾ ಕಾರ್ಯಕರ್ತೆ ಪ್ರೇಮಾ. ಕೆಲ ದಿನಗಳ ಹಿಂದೆ ಪ್ರೇಮಾ ಅವರ ಮನೆಗೆ ಬಂದಿದ್ದ ಅಪರಿಚಿತರಿಬ್ಬರು, 'ನಿಮಗೆ ದೀರ್ಘ ಕಾಲದಿಂದ ಮಕ್ಕಳಾಗಿಲ್ಲ. ನಾವು ಔಷಧ ಕೊಡುತ್ತೇವೆ, ಅದನ್ನು ತೆಗೆದುಕೊಂಡರೆ ಮಕ್ಕಳಾಗುತ್ತೆ' ಎಂದಿದ್ದರು. ಆದರೆ ಇದನ್ನು ನಿರಾಕರಿಸಿದ್ದ ಪ್ರೇಮಾ ಪತಿ ಮಂಜುನಾಥ್, ಅಪರಿಚಿತರಿಬ್ಬರನ್ನೂ ಮನೆಯಿಂದ ಹೊರ ಕಳಿಸಿದ್ದರು.

ನಿನ್ನೆ(ಸೋಮವಾರ) ಮಂಜುನಾಥ್ ಮನೆಯಿಲ್ಲಿಲ್ಲದ ಸಂದರ್ಭದಲ್ಲಿ ಮತ್ತೆ ಪ್ರೇಮಾರ ಮನೆಗೆ ಬಂದ ಅಪರಿಚಿತರಿಬ್ಬರು ಔಷಧ ಪಡೆಯುವಂತೆ ಮನವೊಲಿಸಿದ್ದಾರೆ. ಯಾವುದೋ ಬಾಟಲಿಯನ್ನು ತೋರಿಸಿ ಇದರಲ್ಲಿರುವ ಔಷಧವನ್ನು ಕುತ್ತಿಗೆಗೆ ಹಚ್ಚಿದರೆ ಮಕ್ಕಳಾಗುತ್ತದೆ. ಮಾಂಗಲ್ಯ ಸರ ತೆಗೆದಿಟ್ಟು ಬಿಸಿ ನೀರು ತೆಗೆದುಕೊಂಡು ಬನ್ನಿ ಎಂದಿದ್ದಾರೆ. ಇದನ್ನು ನಂಬಿದ ಪ್ರೇಮಾ, ಮಾಂಗಲ್ಯ ಸರ ತೆಗೆದಿಟ್ಟು ಬಿಸಿ ನೀರು ತರಲು ಅಡುಗೆ ಮನೆಗೆ ತೆರಳಿದಾಗ ಮಾಂಗಲ್ಯಸರ ತೆಗೆದುಕೊಂಡು ಇಬ್ಬರೂ ಪರಾರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net