

ಬೆಂಗಳೂರು: ಜ.13ರಂದು ಸಂಭಿಸಿದ ಭೀಕರ ರಸ್ತೆ ಅಪಘಾತದಲ್ಲಿ 'ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋ ಖ್ಯಾತಿಯ 6 ವರ್ಷದ ಬಾಲಕಿ ಸಮನ್ವಿ ಮೃತಪಟ್ಟ ಕಹಿ ಘಟನೆ ಇನ್ನೂ ಹಸಿಯಾಗೆ ಇದೆ. ಮುದ್ದು ಕಂದನ ಸಾವಿನ ಸುದ್ದಿ, ಸಮನ್ವಿ ತಾಯಿ, ಖ್ಯಾತ ನಿರೂಪಕಿ ಅಮೃತಾ ನಾಯ್ಡು ಅವರ ಕರುಣಾಜಕನ ಕಥೆ ಕೇಳಿ ಲಕ್ಷಾಂತರ ಜನ ಕಣ್ಣೀರಿಟ್ಟಿದ್ದಾರೆ. ಈಗಲೂ ಸಮನ್ವಿ ನೆನಪಾದರೆ ಜನ ಭಾವುಕರಾಗ್ತಾರೆ. ಮಗಳನ್ನು ಕಳೆದುಕೊಂಡ ನೋವಿನಲ್ಲೇ ಅಮೃತಾ. 'ನಾನು 4 ತಿಂಗಳ ಗರ್ಭಿಣಿ... ಪ್ಲೀಸ್ ನೀವೆಲ್ಲ ನನಗೊಂದು ಸಹಾಯ ಮಾಡಿ...' ಎಂದು ಜನರಿಗೆ ಮನವಿ ಮಾಡುತ್ತಾ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಾಕಿಕೊಂಡ ಬರಹ ಓದುತ್ತಿದ್ದರೆ ಎಂತಹವರ ಮನವೂ ಮಿಡಿಯುತ್ತದೆ. ಅಯ್ಯೋ ದೇವರೇ ಈಗಲಾದರೂ ಆ ತಾಯಿಯ ಬೇಡಿಕೆ ಈಡೇರಿಸು, ಕಲ್ಲಾಗಬೇಡ... ಎಂದು ಮನದಲ್ಲೇ ಪ್ರಾರ್ಥಿಸಿಬಿಡ್ತೀರಿ.
'ದೇವರ ಪ್ರತಿರೂಪವಾಗಿ ಕಾಣುತ್ತಿರುವ ನಿಮ್ಮೆಲ್ಲರಿಗೂ ನನ್ನದೊಂದು ಪ್ರಾರ್ಥನೆ. ನಾನೀಗ 4 ತಿಂಗಳ ಗರ್ಭಿಣಿ. ಮತ್ತೆ ನನ್ನ ಮುದ್ದು ಕಂದಮ್ಮ ಸಮನ್ವಿಯ ಬರುವಿಕೆಗಾಗಿ ಈ ತಾಯಿಯ ಜೀವ ಹಂಬಲಿಸುತ್ತಿದೆ. ದಯಮಾಡಿ ನನಗೊಂಡು ಸಹಾಯ ಮಾಡಿ.. ಆ ಭಗವಂತನಲ್ಲಿ ಪ್ರಾರ್ಥಿಸಿ, ನಿಮ್ಮೆಲ್ಲ ಪ್ರಾರ್ಥನೆಯ ಒತ್ತಾಯದಿಂದಾದರೂ ನನ್ನ ಮುದ್ದು ಕಂದಮ್ಮನನ್ನು ನನ್ನ ಮಡಿಲಿಗೆ ಆ ಭಗವಂತ ಮರಳಿಸಲಿ. ಅವಳನ್ನು ನಾನು ತುಂಬಾ ಜೋಪಾನ ಮಾಡುವೆ. ದಯವಿಟ್ಟು ಎಲ್ಲರೂ ಈ ತಾಯಿಯ ಕರೆಗೆ ಕೈಜೋಡಿಸಿ ನನ್ನ ಮಡಿಲಿಗೆ ಸಮನ್ವಿ ಬರುವಂತೆ ಪ್ರಾರ್ಥಿಸಿ. ಅವಳೇ ಮತ್ತೆ ನನ್ನ ಮಗಳಾಗಿ ಬರಬೇಕು. ನಿಮ್ಮೆಲ್ಲರ ಪ್ರಾರ್ಥನೆಯಿಂದ ಇದು ಸಾಧ್ಯ. ಪ್ಲೀಸ್... ಪ್ಲೀಸ್... ದೇವರ ಬಳಿ ಪ್ರಾರ್ಥಿಸಿ... ಅವಳು ನನ್ನ ಮಡಿಲಲ್ಲೇ ಮತ್ತೆ ಹುಟ್ಟಿ ಬರುವಂತೆ ಪ್ರಾರ್ಥಿಸಿ. ಆಗಷ್ಟೇ ನಾನು ಮತ್ತೆ ಬದುಕು ಕಟ್ಟಿಕೊಳ್ಳಲು ಸಾಧ್ಯ' ಎಂದು ಅಮೃತಾ ನಾಯ್ಡು ಜನರ ಬಳಿ ಮನವಿ ಮಾಡಿದ್ದಾರೆ.
ಸಮನ್ವಿ ಅಮೃತಾ ನಾಯ್ಡು ಅವರ 2ನೇ ಮಗು. ಅಮೃತಾರ ಮೊದಲ ಮಗು ಮೃತಪಟ್ಟಿತ್ತು. ಮಗು ಕಳೆದುಕೊಂಡು ನೋವಿನಲ್ಲೇ ಮುಳುಗಿದ್ದ ಅಮೃತಾರ ಬದುಕಿಗೆ ಬೆಳಕು ಬಂದದ್ದು 2ನೇ ಮಗು ಸಮನ್ವಿ ಹುಟ್ಟಿದಾಗ. ಸಮನ್ವಿಯೇ ಅಮೃತಾಗೆ ಎಲ್ಲವೂ ಆಗಿದ್ದಳು. ಇದೀಗ ಸಮನ್ವಿಯನ್ನೂ ವಿಧಿ ಕರೆದುಕೊಂಡಿದೆ. ಮಗಳನ್ನು ಕಳೆದುಕೊಂಡು ನೋವಲ್ಲಿರುವ 4 ತಿಂಗಳ ಗರ್ಭಿಣಿ ಅಮೃತಾ, ಸಮನ್ವಿಯೇ ಮತ್ತೆ ತನ್ನ ಹೊಟ್ಟೆಯಲ್ಲಿ ಹುಟ್ಟಿ ಬರಬೇಕು. ಆ ಭಗವಂತನಿಗೆ ನಮ್ಮ ಮೇಲೆ ಕರುಣೆ ಇಲ್ಲ. ನೀವಾದರೂ ಭಗವಂತನ ಬಳಿ ನಮಗೋಸ್ಕರ ಪ್ರಾರ್ಥಿಸಿ ಎಂದು ಬೇಡಿಕೊಂಡಿದ್ದಾರೆ.