

ಹಾವೇರಿ: ಯುದ್ಧಪೀಡಿತ ಯೂಕ್ರೇನ್ನಲ್ಲಿ ರಷ್ಯಾ ಸೇನಾ ಪಡೆಯ ಶೆಲ್ ದಾಳಿಯಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮದ ಎಂಬಿಬಿಎಸ್ ವಿದ್ಯಾರ್ಥಿ ನವೀನ ಗ್ಯಾನಗೌಡರ ಅವರ ಮೃತದೇಹ ಹುಟ್ಟೂರಿಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ನವೀನ್ರ ಅಂತಿಮ ದರ್ಶನ ಪಡೆಯುವ ಭಾರವಾದ ಮನಸ್ಸಿನಲ್ಲೇ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿದ್ದು, ಹೆತ್ತವರ ಗೋಳಾಟ ನೋಡಿ ಕಂಬನಿ ಮಿಡಿಯುತ್ತಿದ್ದಾರೆ.
ಮಾ.2ರಂದು ಯೂಕ್ರೇನ್ನಲ್ಲಿ ನವೀನ್ ಮೃತಪಟ್ಟಿದ್ದರು. ಈ ಸುದ್ದಿ ತಿಳಿದಾಗಿನಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. 20 ದಿನಗಳ ಬಳಿಕ ಅಂದರೆ ಇಂದು(ಮಾ.21) ನವೀನ್ ಮೃತದೇಹ ಕರ್ನಾಟಕಕ್ಕೆ ಬಂತು. ನಸುಕಿನ 3 ಗಂಟೆಯ ಹೊತ್ತಿಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಾರ್ಥಿವ ಶರೀರವನ್ನು ಬರಮಾಡಿಕೊಂಡರು. ಸದ್ಯ ಸಿಎಂ ಹಾವೇರಿಗೆ ಪ್ರಯಾಣ ಬೆಳೆಸಿದ್ದು, ನವೀನ್ ಸ್ವಗೃಹಕ್ಕೆ ಭೇಟಿ ನೀಡಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಸ್ವಗೃಹ ಚಳಗೇರಿಯ ಮನೆ ಬಳಿ ನವೀನ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಜನರಿಗೆ ವ್ಯವಸ್ಥೆ ಮಾಡಲಾಗಿದೆ. ಶಾಸಕ ಅರುಣ್ ಕುಮಾರ್ ಪೂಜಾರ್ ಕೂಡ ನವೀನ್ರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.