More

    ಯುದ್ಧಭೂಮಿಯಿಂದ ನವೀನ್‌ ದೇಹ ದುಬೈಗೆ ತಂದು, ಅಲ್ಲಿಂದ ಬೆಂಗಳೂರಿಗೆ ತಂದ ಕ್ಲಿಷ್ಟಕರ ಸನ್ನಿವೇಶ ಬಿಚ್ಚಿಟ್ಟ ಸಿಎಂ

    ಬೆಂಗಳೂರು: ಇದೇ 2ರಂದು ಯೂಕ್ರೇನ್‌ನಲ್ಲಿ ಬಾಂಬ್‌ದಾಳಿಗೆ ಬಲಿಯಾದ ಹಾವೇರಿ ಜಿಲ್ಲೆಯ ನವೀನ್‌ ಪಾರ್ಥಿವ ಶರೀರ 20 ದಿನಗಳ ಬಳಿಕ ಬೆಂಗಳೂರನ್ನು ತಲುಪಿದೆ. ಇಂದು ನಸುಕಿನ 3 ಗಂಟೆಯ ಹೊತ್ತಿಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪಾರ್ಥಿವ ಶರೀರವನ್ನು ಬರಮಾಡಿಕೊಂಡರು.

    ಈ ಸಂದರ್ಭದಲ್ಲಿ, ನವೀನ‌ ದೇಹವನ್ನು ತರಲು ಆಗಿರುವ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು. ಯುದ್ಧಭೂಮಿಯಿಂದ ಮೃತದೇಹವನ್ನು ತರುವುದು ಅಷ್ಟು ಸುಲಭದ ಮಾತಲ್ಲ. ಮೊದಲಿಗೆ ಅಂತ್ಯಕ್ರಿಯೆಗೆಂದೇ ಇರುವ ಫನರಲ್‌ ಏಜೆಂಟ್ಸ್‌ಗಳನ್ನು (Funeral Agents) ಸಂಪರ್ಕಿಸಿ, ನವೀನ್‌ ದೇಹವನ್ನು ಪಡೆಯಲಾಗಿತು. ನಂತರ ಎಂಬಾಮಿಂಗ್ (embalming) ಮಾಡಲು ಸಾಧ್ಯವಾಯಿತು. ಶವಾಗಾರದ ಬಳಿ ಇನ್ನೂ ಶೇಲ್ಲಿಂಗ್ ನಡೆಯುತ್ತಿದ್ದರೂ ಅಲ್ಲಿಂದ ವಾರ್ಸೊವಾಕ್ಕೆ ತಂದು ಅಲ್ಲಿ ಪುನಃ ಜಿಂಕ್ ಕೋಟಿಂಗ್ ಮಾಡಿ ದುಬೈಗೆ ತಂದು, ಅಲ್ಲಿಂದ ಬೆಂಗಳೂರಿಗೆ ತರಲಾಗಿದೆ ಎಂದು ಹೇಳಿದರು.

    ಯುದ್ಧಭೂಮಿಯಿಂದ ಮೃತದೇಹ ತರುವ ಅಸಾಧ್ಯವಾದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರ ಭಗೀರಥ ಪ್ರಯತ್ನದಿಂದ ಸಾಧಿಸಲಾಗಿದೆ. ಯೂಕ್ರೇನ್ ಸುತ್ತಲಿನ ಎಲ್ಲಾ ದೇಶಗಳ ಸಂಪರ್ಕವನ್ನು ಬೆಳೆಸಿ ರಾಜತಾಂತ್ರಿಕವಾಗಿ ವಿಮಾನನಿಲ್ದಾಣದಲ್ಲಿ ವಿಶೇಷ ವಿಮಾನಗಳಿಗೆ ಅನುಮತಿ ಪಡೆದು ಕರೆತರಲಾಗಿದೆ. ಇಡೀ ಪ್ರಕ್ರಿಯೆ ಸಮನ್ವಯದ ಆಧಾರದ ಮೇಲೆಯೇ ಆಗಿದೆ ಎಂದರು.

    ಯುದ್ಧ ಭೂಮಿಯಿಂದಲೂ ಹಲವಾರು ವಿದ್ಯಾರ್ಥಿಗಳು ವಾಪಸಾಗಿದ್ದಾರೆ. ಆದರೆ ದುರ್ದೈವವಶಾತ್ ನವೀನ್ ಪ್ರಾಣ ಕಳೆದುಕೊಂಡರು. ಪ್ರಧಾನಿ ನರೇಂದ್ರ ಮೋದಿಯವರು ಕುಟುಂಬವನ್ನು ಸಂಪರ್ಕಿಸಿ ಧೈರ್ಯ ಹೇಳಿದ್ದಾರೆ. ಇಡೀ ದೇಶದ 19000 ವಿದ್ಯಾರ್ಥಿಗಳನ್ನು ವಾಪಸ್‌ ಕರೆತರಲಾಗಿದ್ದು, ಕರ್ನಾಟಕದ 572 ಜನ ಹಿಂದಿರುಗಿದ್ದಾರೆ. ಕರ್ನಾಟಕದ 62 ವಿದ್ಯಾರ್ಥಿಗಳು ಆಪರೇಷನ್ ಗಂಗಾ ಪ್ರಾರಂಭವಾಗುವ ಮುಂಚೆಯೇ ಬಂದಿದ್ದಾರೆ. 3 ವಾರಗಳ ಕಾಲ ನಡೆದ ಆಪರೇಷನ್ ಗಂಗಾ ಸುಲಭದ ಮಾತಲ್ಲ. ಬೇರೆ ಯಾವ ರಾಷ್ಟ್ರಗಳೂ ತನ್ನ ನಾಗರಿಕರನ್ನು ಕರೆಸುವ ಇಷ್ಟು ದೊಡ್ಡ ಪ್ರಯತ್ನ ವನ್ನು ಮಾಡಿಲ್ಲ. ಟೀಕೆ ಮಾಡುವವರು ಬಹಳ ಜನ ಇದ್ದಾರೆ. ಇದನ್ನು ಪ್ರಾಮಾಣಿಕವಾಗಿ ಮಾಡಿ ಯಶಸ್ವಿಯಾಗುವುದು ಮಾನವೀಯ ಗುಣವನ್ನು ಪ್ರಧಾನ ಮಂತ್ರಿಗಳು ಮೆರೆದಿದ್ದಾರೆ ಎಂದರು.

    ಪ್ರಧಾನ ಮಂತ್ರಿಗಳ ಕಚೇರಿ ಹಾಗೂ ವಿದೇಶಾಂಗ ಸಚಿವ ಜಯಶಂಕರ್ ಅವರೊಂದಿಗೂ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಂಸತ್ ಸದಸ್ಯರೂ ಸಹ ಸಂಪರ್ಕದಲ್ಲಿದ್ದು ವಿದ್ಯಾರ್ಥಿಗಳ ವಾಪಸಾತಿಗೆ ಪ್ರಯತ್ನ ಮಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

    ಕನ್ನಡಿಗರ ಪರವಾಗಿ ಪ್ರಧಾನಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ಲಿಬಿಯಾದಲ್ಲಿಯೂ ಐಎಸ್ ಐ ದಾಳಿ ಮಾಡಿದಾಗಲೂ ಭಾರತೀಯರನ್ನು ತೆರವು ಮಾಡಲಾಗಿತ್ತು. ದೇಶ ಒಂದ ಶಕ್ತಿ ಏನು ಎನ್ನುವದು ಇಂಥ ಸಂದರ್ಭಗಳಲ್ಲಿ ತಿಳಿಯುತ್ತದೆ ಎಂದರು.
    .

    ಬೆಂಗಳೂರು ಮಾತ್ರವಲ್ಲದೆ, ದೆಹಲಿ, ಗಜಿಯಾಬಾದ್, ಮುಂಬೈ ನಗರಗಳಿಂದ ಮನೆಗೆ ಮುಟ್ಟಿಸುವವರೆಗೂ ಕರ್ನಾಟಕ ಸರ್ಕಾರ ಕಾಳಜಿ ವಹಿಸಿದೆ. ಇದರಲ್ಲಿ ಕರ್ನಾಟಕ ಸರ್ಕಾರದ ಪಾತ್ರವೂ ಹಿರಿದಿದೆ. ಮೊದಲಿಗೆ ವಾಟ್ಸ್‌ಆ್ಯಪ್‌ ಗುಂಪು ರಚಿಸಿ, ತಕ್ಷಣವೇ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಬೆಳೆಸಿ, ಧೈರ್ಯ ಹೇಳಿತು. ನಿರಂತರವಾಗಿ ಸಂಪರ್ಕ ಸಾಧಿಸಲಾಗಿತ್ತು. ಟೋಲ್ ಫ್ರೀ ಸಂಖ್ಯೆಯಲ್ಲಿ 12 ತಾಸಿನೊಳಗೆ ಪ್ರಾರಂಭಿಸಿತು.

    ಯೂಕ್ರೇನ್‌ ರಾಯಭಾರಿ ಕಚೇರಿಯೊಂದಿಗೆ ಐ.ಎ. ಎಸ್ ಅಧಿಕಾರಿ ಮನೋಜ್ ರಾಜನ್ ಅವರು ನಿರಂತರವಾಗಿ ಸಂಪರ್ಕದಲ್ಲಿದ್ದು, ಶ್ರಮವಹಿಸಿದ್ದಾರೆ. ನವೀನ್ ಅವರನ್ನು ಜೀವಂತವಾಗಿ ತರಲಾಗಲಿಲ್ಲ ಎಂಬ ದುಃಖ ಸದಾ ಇರುತ್ತದೆ. ಈಗ ಅವರ ಕುಟುಂಬದವರಿಗೆ ನೆರವು ನೀಡಲಾಗುವುದು. ಅವರೊಂದಿಗೆ ನಾವು ಇದ್ದೇವೆ. ಇಂಥ ಘಟನೆಗಳು ಮರುಕಳಿಸದಂತೆ ಭಗವಂತನಲ್ಲಿ ಪ್ರಾರ್ಥನೆ ಮಾಡಲು ಸಾಧ್ಯ. ಅವನ ಆತ್ಮಕ್ಕೆ ಶಾಂತಿ ದೊರೆಯಲಿ ಎಂದರು.

    ಇದಾಗಲೇ ಇಷ್ಟೆಲ್ಲಾ ಸಾಹಸದಿಂದ ತಮ್ಮ ಪುತ್ರನ ಮೃತದೇಹವನ್ನು ತಂದ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ನವೀನ್‌ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

    VIDEO: ಸಾವಿನಲ್ಲೂ ಸಾರ್ಥಕತೆ- ಡಾಕ್ಟರ್‌ ಆಗಬೇಕೆಂದು ಹಂಬಲಿಸಿದ್ದ ನವೀನ್‌ ಮೃತದೇಹ ವಿದ್ಯಾರ್ಥಿಗಳ ಅಧ್ಯಯನಕ್ಕೆ…

    VIDEO: ಡಾಕ್ಟರ್‌ ಮಗನನ್ನು ಅಪ್ಪ-ಅಮ್ಮ ಸ್ವಾಗತಿಸಬೇಕಿತ್ತು, ಇದೆಂಥ ವಿಧಿಯಾಟ… ಸಿಎಂ ಬೊಮ್ಮಾಯಿ ನೋವಿನ ನುಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts