ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಆರಂಭಕ್ಕೆ ತಾತ್ಕಾಲಿಕ ತಡೆ: ಡಾ.ಸಿ.ಅಶ್ವತ್ಥನಾರಾಯಣ

ashwathnarayana
Published on

ಶಿವಮೊಗ್ಗ: ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ)ಯನ್ನು ಕರೊನಾ ಇರುವ ಕಾರಣಕ್ಕೆ ಶಾಲೆಗಳಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸುತ್ತಿಲ್ಲ. ಸೋಂಕು ಕಡಿಮೆ ಆಗುತ್ತಿದ್ದಂತೆ ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಎನ್‌ಇಪಿಯನ್ನು ಬಹಳಷ್ಟು ಸಮಾಲೋಚನೆ ನಡೆಸಿ 5 ವರ್ಷ ಕಾಲಾವಕಾಶ ನೀಡಿ 2021ರ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ನಿಶ್ಚಯಿಸಲಾಗಿದೆ. ಯಾವುದೇ ಗೊಂದಲವಿಲ್ಲದೆ ನಿರಾಳವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಎಲ್ಲ ಸ್ವಾಯತ್ತ ವಿಶ್ವವಿದ್ಯಾಲಯಗಳು ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಂಡಿವೆ. ಕುವೆಂಪು ವಿವಿಯಲ್ಲೂ ಇದೇ ವರ್ಷದಿಂದ ಎನ್‌ಇಪಿ ಜಾರಿಗೊಳ್ಳಲಿದೆ. ಕಲಿಕೆಗೆ ಹೊಸ ರೂಪ ನೀಡುವ ವಿಧಾನ ಇದಾಗಿದೆ ಎಂದರು.

ದೈಹಿಕ, ಸಾಂಸ್ಕೃತಿಕ, ಸಾಮಾಜಿಕ, ಎನ್‌ಸಿಸಿ, ಎನ್‌ಎಸ್‌ಎಸ್ ಚಟುವಟಿಕೆಗಳನ್ನೂ ಒಳಗೊಂಡಿದೆ. ಈ ಮೊದಲು ಕಲಾ ವಿಭಾಗದ ವಿದ್ಯಾರ್ಥಿಗಳು ವಿಜ್ಞಾನ ಅಥವಾ ವಾಣಿಜ್ಯ ಕೋರ್ಸ್‌ಗಳ ಕಲಿಕೆ ಅಸಾಧ್ಯವಾಗಿತ್ತು. ಈ ನೀತಿಯಿಂದ ಯಾವುದೇ ವಿದ್ಯಾರ್ಥಿ ತನ್ನಿಷ್ಟದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ದೂರದೃಷ್ಟಿ ಇಟ್ಟುಕೊಂಡು ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸರ್ಕಾರದ ನಿರ್ಧರಿಸಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಸಾಕಷ್ಟು ಶ್ರಮ ಮತ್ತು ಆಸಕ್ತಿಯಿಂದ ಎನ್‌ಇಪಿ ಜಾರಿಗೊಳಿಸಲಾಗುತ್ತಿದೆ. ಇದು ಹಿಂದುಳಿದವರು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದ ಸಚಿವರು, ಹಿಂದುಳಿದ ವರ್ಗಗಳ ಆಯೋಗದ ವರದಿ ಜಾರಿ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net