ಸಾಯಲು ಕಿರಿ ಮಗಳನ್ನು ತಬ್ಬಿಕೊಂಡೇ ನದಿಗೆ ಹಾರಿದ ತಾಯಿ: ಮತ್ತಿಬ್ಬರು ಅಮ್ಮನ ಕೈಯಿಂದ ತಪ್ಪಿಸಿಕೊಂಡು ಬಚಾವ್!

sucide
Published on

ಗದಗ: ಮೂರು ಮಕ್ಕಳ ಸಮೇತ ಸಾಯಲು ಬಂದ ತಾಯಿ, ಚಿಕ್ಕ ಮಗಳನ್ನು ತಬ್ಬಿಕೊಂಡೇ ನದಿಗೆ ಹಾರಿದ ಹೃದಯವಿದ್ರಾವಕ ಘಟನೆ ಬುಧವಾರ ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಬಳಿ ಮಲಪ್ರಭಾ ನದಿಯಲ್ಲಿ ಸಂಭವಿಸಿದೆ. ಈ ವೇಳೆ ಸಾವಿಗೆ ಹೆದರಿದ ಮತ್ತಿಬ್ಬರು ಮಕ್ಕಳು ಅಮ್ಮನ ಕೈಯಿಂದ ತಪ್ಪಿಸಿಕೊಂಡು ಬಚಾವ್ ಆಗಿದ್ದಾರೆ.

ಸಂಗಮೇಶ ಚಲ್ಲಿಕೇರಿ ಅವರ ಪತ್ನಿ ಉಮಾದೇವಿ(45) ಮತ್ತು ಇವರ ಕಿರಿ ಮಗಳು(2) ನದಿಗೆ ಹಾರಿದವರು. ಸಂಗಮೇಶ ಮತ್ತು ಉಮಾದೇವಿ ದಂಪತಿಗೆ ನಾಲ್ವರು ಮಕ್ಕಳು. ಈ ಪೈಕಿ ಓರ್ವ ಪುತ್ರ, ಮೂವರು ಪುತ್ರಿಯರು. 6 ತಿಂಗಳ ಹಿಂದೆ ಕರೊನಾ ಸೋಂಕಿಗೆ ಸಂಗಮೇಶ ಬಲಿಯಾಗಿದ್ದರು. 3 ಮಕ್ಕಳು ತಾಯಿ ಜತೆ ಗ್ರಾಮದಲ್ಲೇ ಇದ್ದರು. ಹಿರಿಯ ಪುತ್ರಿ ಗದಗದಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.

ಸುಮಾರು 20 ಲಕ್ಷ ರೂ. ಸಾಲದ ಸುಳಿಯಲ್ಲಿ ಈ ಕುಟುಂಬ ಸಿಲುಕಿತ್ತು. ಮನಎಯ ಯಜಮಾನ ಕರೊನಾದಿಂದ ಮೃತಪಟ್ಟ ಬಳಿಕ ಕುಟುಂಬಕ್ಕೆ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿತ್ತು. ಜಿಗುಪ್ಸೆಗೊಂಡ ಉಮಾದೇವಿ, ತನ್ನೊಂದಿಗಿದ್ದ ಮೂವರು ಮಕ್ಕಳನ್ನು ಕರೆದುಕೊಂಡು ಮಲಪ್ರಭಾ ನದಿ ಬಳಿ ಬಂದಿದ್ದಳು. ಸಾಯುವ ವಿಚಾರ ತಿಳಿಯುತ್ತಿದ್ದಂತೆ ಇಬ್ಬರು  ಮಕ್ಕಳು ಅಮ್ಮನ ಕೈಯಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಬಳಿಕ ಕಿರಿಮಗಳೊಂದಿಗೆ ನದಿಗೆ ಹಾರಿದ್ದಾಳೆ.

ಸ್ಥಳಕ್ಕೆ ದೌಡಾಯಿಸಿದ ರೋಣ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ತಾಯಿ-ಮಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net