

ಪ್ರವಾದಿ ಮುಹಮ್ಮದ್(ಸ) ಒಂದು ಸಂದರ್ಭದಲ್ಲಿ ಹೀಗೆ ಹೇಳಿದರು: ವಿಶ್ವಾಸಿಯು ವಿಶ್ವಾಸಿಯ ಕನ್ನಡಿಯಾಗಿರುತ್ತಾನೆ ಹಾಗೂ ಸಹೋದರನಾಗಿರುತ್ತಾನೆ. ಆತನು ಆತನನ್ನು ವಿನಾಶದಿಂದ ರಕ್ಷಿಸುತ್ತಾನೆ. ವಿಶ್ವಾಸಿಯು ವಿಶ್ವಾಸಿಯ ಕನ್ನಡಿಯಾಗಿರುತ್ತಾನೆ ಎಂದರೆ ಆತನಿಗಾಗುವ ತೊಂದರೆಯನ್ನು ತನ್ನ ತೊಂದರೆ ಎಂದು ಭಾವಿಸುತ್ತಾನೆ. ಅವನು ತನ್ನ ತೊಂದರೆಗಳಿಗಾಗಿ ಓಡಾಡುವಂತೆಯೇ ತನ್ನ ಸಹೋದರನ ತೊಂದರೆಗಳಿಗಾಗಿಯೂ ಚಡಪಡಿಸುತ್ತಾನೆ. ಮತ್ತು ಅದನ್ನು ದೂರೀಕರಿಸುವ ಬಗ್ಗೆ ಚಿಂತಿತನಾಗುತ್ತಾನೆ.
ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸಹೋದರನ ಕನ್ನಡಿಯಾಗಿರುತ್ತಾನೆ. ಆದ್ದರಿಂದ ತನ್ನ ಸಹೋದರನು ಯಾವುದಾದರೂ ಒಂದು ಸಂಕಷ್ಟದಲ್ಲಿ ಇದ್ದರೆ ಅವನ ಸಂಕಷ್ಟವನ್ನು ದೂರ ಮಾಡಬೇಕು. ಅದೇ ರೀತಿ ಸಹೋದರನಲ್ಲಿ ಏನಾದರೂ ಕುಂದುಕೊರತೆ ಕಂಡರೆ ಅವುಗಳನ್ನು ತನ್ನ ಕುಂದುಕೊರತೆಗಳೆಂದು ಭಾವಿಸಿ ನೀಗಿಸಬೇಕು. ವಿಶ್ವಾಸಿಯು ವಿಶ್ವಾಸಿಯ ಮಟ್ಟಿಗೆ ಒಂದು ಕಟ್ಟಡದಂತೆ. ಅದರ ಒಂದು ಭಾಗವು ಮತ್ತೊಂದು ಭಾಗಕ್ಕೆ ಶಕ್ತಿ ನೀಡುತ್ತದೆ. ಇದನ್ನು ಸರಿಯಾಗಿ ಅರ್ಥ ಮಾಡಿಸಲು ಪ್ರವಾದಿ(ಸ)ಯವರು ತಮ್ಮ ಒಂದು ಕೈ ಬೆರಳನ್ನು ಬೆರಳುಗಳಿಗೆ ಪೋಣಿಸಿದರು. ಈ ಅರ್ಥಪೂರ್ಣ ಹದೀಸ್(ವಚನ)ನಲ್ಲಿ ಮುಸ್ಲಿಂ ಸಮಾಜವನ್ನು ಒಂದು ಬಲಿಷ್ಠ, ಶಕ್ತಿಶಾಲಿ ಕಟ್ಟಡಕ್ಕೆ ಹೋಲಿಸಲಾಗಿದೆ. ಅದರ ಇಟ್ಟಿಗೆ ಪರಸ್ಪರ ಸೇರಿಕೊಂಡಿರುವಂತೆಯೇ ಮುಸ್ಲಿಮರೂ ಪರಸ್ಪರ ಒಗ್ಗಟ್ಟಿನಿಂದ ಇರಬೇಕು.
ಪರಸ್ಪರ ಸಹಾಯ ಮಾಡಬೇಕು, ಸಹಕಾರ ನೀಡಬೇಕು. ಅವರ ಶಕ್ತಿಯ ಒಳಗುಟ್ಟು ಅವರು ಪರಸ್ಪರ ಒಗ್ಗಟ್ಟಾಗಿರುವುದನ್ನು ಅವಲಂಬಿಸಿದೆ ಎಂಬುದು ಅವರ ಗಮನದಲ್ಲಿರಬೇಕು. ಅವರು ಬಿಡಿ ಇಟ್ಟಿಗೆಗಳಂತಾದರೆ ಅವರನ್ನು ಗಾಳಿಯ ಪ್ರತಿಯೊಂದು ಹೊಡೆತವು ಹಾರಿಸಿಕೊಂಡು ಹೋಗಬಹುದು ಹಾಗೂ ನೀರಿನ ಪ್ರತಿಯೊಂದು ಅಲೆಯು ತೇಲಿಸಿಕೊಂಡು ಹೋಗಬಹುದು. ಪ್ರವಾದಿ(ಸ) ಅವರ ಮಾತನ್ನು ಅವರ ಹಿರಿಯರಾದ (ರ) ಅನಸ್ಅವರು ಪುನರಾವರ್ತಿಸುತ್ತಾರೆ. ನಿನ್ನ ಸಹೋದರನಿಗೆ ಸಹಕರಿಸು -ಆತ ಅಕ್ರಮಿಯಾಗಿದ್ದರೂ ಸಹ. ಆಗ ಒಬ್ಬ ವ್ಯಕ್ತಿ ಪ್ರಶ್ನಿಸಿದನು, ಪ್ರವಾದಿವರ್ಯರೇ, ಅಕ್ರಮಿಗೆ ನೆರವಾಗುವುದು ಹೇಗೆ ಎಂದು ಅರ್ಥ ವಾಗುವುದಿಲ್ಲವಲ್ಲ!’. ಆಗ ಪ್ರವಾದಿ ಹೇಳಿದರು, ‘ಅವನು ಅಕ್ರಮ ಮಾಡದಂತೆ ತಡೆಯುವುದು, ಅದೇ ಆತನಿಗೆ ನೆರವಾಗುವುದಾಗಿದೆ’.