ಚುರುಮುರಿ ತಿಂದು ಬದುಕಿದ್ದೆವು; ಆರಂಭದ ದಿನಗಳಲ್ಲಿ ಉಳಿದಿದ್ದೇ ಪವಾಡ: ಅನುಭವ ಹಂಚಿಕೊಂಡ ಕಾರ್ವಿುಕರು

UTT Tunnel
Published on

ಉತ್ತರಕಾಶಿ: ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ವಿುಕರು, 17 ದಿನ ತಾವು ಆ ವಾತಾವರಣದಲ್ಲಿ ಕಾಲ ಕಳೆದಿದ್ದು ಹೇಗೆ ಎಂಬುದರ ಕುತೂಹಲಕಾರಿ ವಿಷಯಗಳನ್ನು ಹೊರಗೆಡವಿದ್ದಾರೆ.

‘ಸುರಂಗದಲ್ಲಿ ಸಿಲುಕಿದ್ದ ಬಹುತೇಕರಿಗೆ ಬದುಕುವ ಆಸೆಯೇ ಕಮರಿ ಹೋಗಿತ್ತು’ ಎಂದು ಆ ಕಾರ್ವಿುಕರ ಪೈಕಿ ಒಬ್ಬನಾದ ಝಾರ್ಖಂಡ್​ನ ಶ್ರಮಿಕ ಅನಿಲ್ ಬೇಡಿಯಾ ಹೇಳಿದ್ದಾನೆ. ‘ದುರಂತದ ಆರಂಭದ ದಿನಗಳಲ್ಲಿ ಚುರುಮುರಿ ತಿಂದು ಹಾಗೂ ಬಂಡೆಗಳಿಂದ ಜಿನುಗುತ್ತಿದ್ದ ನೀರನ್ನು ಚೀಪಿ ದಿನ ತಳ್ಳಿದೆವು. ನಂತರ ಸರ್ಕಾರದಿಂದ ಎಲ್ಲ ಸೌಲಭ್ಯಗಳು ಬರತೊಡಗಿದವು’ ಎಂದು ಕಾರ್ವಿುಕರು ಎದುರಿಸಿದ್ದ ಕರಾಳ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾನೆ.

‘ಯೋಗ ಮತ್ತು ಬೆಳಗಿನ ನಡಿಗೆಯ ಮೂಲಕ ಕಾರ್ವಿುಕರು ಧೃತಿಗೆಡದೆ ಚೈತನ್ಯವನ್ನು ಉಳಿಸಿ ಕೊಂಡಿದ್ದರು’ ಎಂದು ರಕ್ಷಣೆ ಗೊಂಡ ಕೆಲವೇ ಸಮಯದಲ್ಲಿ ದೂರವಾಣಿ ಮೂಲಕ ತನ್ನನ್ನು ಸಂಪರ್ಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾರ್ವಿುಕ ಸಬಾ ಅಹಮದ್ ವಿವರಿಸಿದ್ದಾನೆ. ಶ್ರಮಜೀವಿಗಳ ಮನೋ ಸ್ಥೈರ್ಯಕ್ಕೆ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ. ‘ನಾವು ಯಾವತ್ತೂ ಬದುಕುವ ಆಸೆಯನ್ನು ಕಳೆದುಕೊಳ್ಳಲಿಲ್ಲ’ ಎಂದು ಇನ್ನೊಬ್ಬ ಕಾರ್ವಿುಕ ವಿಶಾಲ್ ಹೇಳಿದ್ದಾನೆ.

ಮೊಬೈಲ್ ವಾಲ್​ಪೇಪರ್: ‘ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟ ತನ್ನ ಸೋದರನೊಬ್ಬ ಆಗಾಗ ಹೇಳುತ್ತಿದ್ದ ಮಾತುಗಳು ಸುರಂಗದಲ್ಲಿ ಸಿಕ್ಕಿ ಹಾಕಿಕೊಂಡಷ್ಟೂ ದಿನ ಧೈರ್ಯದಿಂದಿರಲು ಪ್ರೇರಣೆಯಾದವು’ ಎಂದು 25 ವರ್ಷದ ಮನ್​ಜೀತ್ ಚೌಹಾಣ್ ಎಂಬ ಉತ್ತರ ಪ್ರದೇಶದ ಲಖಿಂಪುರದ ಕಾರ್ವಿುಕ ಹೇಳಿದ್ದಾನೆ. ‘ನಮ್ಮ ಹೆತ್ತವರನ್ನು ನಾವಲ್ಲದೆ ಬೇರೆ ಯಾರು ನೋಡಿಕೊಳ್ಳುತ್ತಾರೆ?’ ಎಂಬ ಸೋದರನ ಮಾತುಗಳು, ಸುರಂಗದಲ್ಲಿದ್ದಷ್ಟು ಕಾಲವೂ ತನ್ನ ಕಿವಿಯಲ್ಲಿ ಗುಂಯ್ಗುಡುತ್ತಿದ್ದವು. ತಂದೆ, ತಾಯಿ ಹಾಗೂ ಇತರ ಕುಟುಂಬ ಸದಸ್ಯರ ಚಿತ್ರ ತನ್ನ ಕಣ್ಣ ಮುಂದೆ ಹಾದು ಹೋಗುತ್ತಿತ್ತು. ತಂದೆ-ತಾಯಿಯ ಚಿತ್ರವನ್ನು ಮೊಬೈಲ್​ನ ವಾಲ್​ಪೇಪರ್ ಮಾಡಿಕೊಂಡಿದ್ದೆ. ಅದನ್ನು ಪ್ರತಿದಿನ ಅನೇಕ ಬಾರಿ ನೋಡುತ್ತಿದ್ದೆ. ಬದುಕುವ ಆಸೆ ಕಮರದಿರಲು ಅದು ನೆರವಾಯಿತು’ ಎಂದು ಚೌಹಾಣ್ ಭಾವುಕನಾಗಿ ಹೇಳಿದ್ದಾನೆ.

108 ಗಂಟೆಗಳ ಸತತ ಕಾರ್ಯಾಚರಣೆಯ ಫಲವಾಗಿ ಕಾತರದಿಂದ ಕಾಯುತ್ತಿದ್ದ ಕ್ಷಣ ಮಂಗಳವಾರ ಸಂಜೆ ಮೂರ್ತರೂಪಕ್ಕೆ ಬಂದು ಎಲ್ಲ 41 ಶ್ರಮಜೀವಿಗಳು ಸುರಂಗದಿಂದ ಹೊರಬಂದು ಕುಟುಂಬ ಸದಸ್ಯರು ಮಾತ್ರವಲ್ಲದೆ ಇಡೀ ದೇಶ ನಿಟ್ಟುಸಿರು ಬಿಟ್ಟಿತ್ತು.

ಭಾವುಕರಾದ ಪ್ರಧಾನಿ

ಸುರಂಗದಿಂದ ಕಾರ್ವಿುಕರನ್ನು ಯಶಸ್ವಿಯಾಗಿ ಪಾರು ಮಾಡಿದ ವಿಚಾರ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ‘ತೀರಾ ಭಾವುಕರಾದರು’ ಎಂದು ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಹಲವು ರಾಜ್ಯಗಳ ಚುನಾವಣಾ ಪ್ರಚಾರ ಕಾರ್ಯದಲ್ಲಿ ವ್ಯಸ್ತರಾಗಿದ್ದ ನಡುವೆಯೂ ಮೋದಿ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಹಿತ ವಿವಿಧ ಮೂಲಗಳಿಂದ ರಕ್ಷಣಾ ಕಾರ್ಯಾಚರಣೆಯ ಕ್ಷಣಕ್ಷಣದ ಅಪ್ಡೇಟ್​ಗಳನ್ನು ಪಡೆಯುತ್ತಿದ್ದರು ಎಂದು ಸಚಿವರು ತಿಳಿಸಿದರು.

ತಲಾ 1 ಲಕ್ಷ ರೂ. ವಿತರಣೆ

ಚಿನ್ಯಾಲಿಸೂರ್​ನ ಆಸ್ಪತ್ರೆಗೆ ಧಾವಿಸಿದ ಸಿಎಂ ಪುಷ್ಕರ್ ಸಿಂಗ್ ಧಾಮಿ ಕಾರ್ವಿುಕರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಲ್ಲದೆ ಪ್ರತಿಯೊಬ್ಬರಿಗೆ ತಲಾ 1 ಲಕ್ಷ ರೂ. ಚೆಕ್ ವಿತರಿಸಿದರು. ಆಸ್ಪತ್ರೆ ಬಳಿ ಇದ್ದ ಕಾರ್ವಿುಕರ ಕುಟುಂಬ ಸದಸ್ಯರನ್ನು ಧಾಮಿ ಸಂತೈಸಿದರು. ಕಾರ್ವಿುಕರನ್ನು ರಕ್ಷಿಸಿದ್ದಕ್ಕಾಗಿ ಕುಟುಂಬಸ್ಥರು ಸಿಎಂಗೆ ಧನ್ಯವಾದ ಅರ್ಪಿಸಿದರು.

ಗೋಲ್ಡಿ ಸೋಲಾರ್ ಆಫರ್

ಸುರಂಗದಿಂದ ಸುರಕ್ಷಿತವಾಗಿ ಮರಳಿರುವ ಎಲ್ಲ 41 ಕಾರ್ವಿುಕರ ಕುಟುಂಬಗಳಿಗೆ ಉಚಿತವಾಗಿ ರೂಫ್​ಟಾಪ್ ಸೌರಶಕ್ತಿ ವ್ಯವಸ್ಥೆಯ ಮೂಲಕ ಮನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಗುಜರಾತ್​ನ ಗೋಲ್ಡಿ ಸ್ಟಾರ್ ಕಂಪನಿ ಮುಂದಾಗಿದೆ.

ಕಾರ್ವಿುಕರು ಏಮ್ಸ್​ಗೆ ದಾಖಲು

ನವದೆಹಲಿ: ಕುಸಿದ ಸಿಲ್ಕ್​ಯಾರಾ ಸುರಂಗದಿಂದ ಮಂಗಳವಾರ ಹೊರಬಂದ ಎಲ್ಲ 41 ಕಾರ್ವಿುಕರನ್ನು ಬುಧವಾರ ವಿಮಾನದ ಮೂಲಕ ಕರೆತಂದು ಆರೋಗ್ಯ ತಪಾಸಣೆಗಾಗಿ ಋಷಿಕೇಶದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್್ಸ) ದಾಖಲಿಸ ಲಾಗಿದೆ. ಸುರಂಗದಿಂದ ಹೊರ ತಂದ ಮೇಲೆ ಎಲ್ಲರನ್ನು ಉತ್ತರಕಾಶಿಯ ಚಿನ್ಯಾಲಿಸೂರ್​ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾರ್ವಿುಕರನ್ನು ಮುಖ್ಯವಾಗಿ ಮಾನಸಿಕ ಪರೀಕ್ಷೆಗೆ ಒಳಪಡಿಸ ಲಾಗುತ್ತದೆ. ಗುರುವಾರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ಮೇಲೆ ತಮ್ಮ ತಮ್ಮ ಮನೆಗಳಿಗೆ ತೆರಳುವ ಸಾಧ್ಯತೆಯಿದೆ.

ಕಾರ್ವಿುಕರಿಗೆ ವಿಶಿಷ್ಟ ಗುರುತು

ವಲಸೆ ಕಾರ್ವಿುಕರ ಹಕ್ಕುಗಳನ್ನು ರಕ್ಷಿಸಲು ದೇಶಾದ್ಯಂತ ಕಟ್ಟಡ-ನಿರ್ವಣ ಕಾರ್ವಿುಕರಿಗೆ ವಿಶಿಷ್ಟ ಗುರುತಿಸು ವಿಕೆ ವ್ಯವಸ್ಥೆ ಕಡ್ಡಾಯಗೊಳಿಸಲಾಗುವುದು. ಇದನ್ನು ಆಧಾರ್​ಗೆ ಸಂರ್ಪಸಿ ಇ-ಶ್ರಮ್ ಡೇಟಾಬೇಸ್​ಜತೆ ಮಿಳಿತಗೊಳಿಸ ಲಾಗುತ್ತದೆ. ವಲಸೆ ಕಾರ್ವಿುಕರು ಇರುವಲ್ಲೇ ಅವರಿಗೆ ಸೌಲಭ್ಯ ವಿತರಿಸಲು ಇದರಿಂದ ಸಾಧ್ಯ ಎಂದು ಕಾರ್ವಿುಕ ಇಲಾಖೆ ಕಾರ್ಯದರ್ಶಿ ಆರತಿ ಅಹುಜಾ ಹೇಳಿದರು.

ಮಗ ಬಚಾವಾದ ದಿನವೇ ತಂದೆ ಸಾವು

ಸುರಂಗದಲ್ಲಿ ಸಿಲುಕಿದ್ದ ಪುತ್ರನಿಗಾಗಿ 16 ದಿನಗಳಿಂದ ಕಾಯುತ್ತಿದ್ದ ತಂದೆ, ಮಗ ರಕ್ಷಿಸಲ್ಪಟ್ಟ ದಿನವೇ ಸಾವಿಗೀಡಾದ ದುರಂತ ಸಂಭವಿಸಿದೆ. ಜಾರ್ಖಂಡ್​ನ ಭಕ್ತು ಮುಮು ಎಂಬ 29 ವರ್ಷದ ಪುತ್ರನಿಗೆ ಕಾಯುತ್ತಿದ್ದ 70 ವರ್ಷದ ತಂದೆ ಬಸೆಟ್ ಮುಮು, ಮಂಗಳವಾರ ಬೆಳಗ್ಗೆ 8ಕ್ಕೆ ಮಂಚದಿಂದ ಬಿದ್ದು ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದರು. ಅದೇ ದಿನ ರಾತ್ರಿ 8ರ ಸುಮಾರಿಗೆ ಮಗ ಸುರಂಗದಿಂದ ರಕ್ಷಿಸಲ್ಪಟ್ಟಿದ್ದ.

ತನ್ನ ಪ್ರಜೆಗಳ ಪ್ರಾಣ ರಕ್ಷಣೆಗಾಗಿ ಭಾರತ ಏನನ್ನೂ ಹಾಗೂ ಎಲ್ಲವನ್ನೂ ಮಾಡಬಲ್ಲದು ಎನ್ನುವುದನ್ನು ಸುರಂಗ ರಕ್ಷಣಾ ಕಾರ್ಯಾಚರಣೆ ಸಾಬೀತುಪಡಿಸಿದೆ.

| ನವೀನ್ ಪಟ್ನಾಯಕ್ ಒಡಿಶಾ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net