

ಬೆಂಗಳೂರು: ಕಾಂಗ್ರೆಸ್ನವರೇ ಪಾದಯಾತ್ರೆ ಬೇಡ, ತೀರ್ಥ ಯಾತ್ರೆ ಮಾಡಿ ಎಂದು ಸಚಿವ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಪಂಚರಾಜ್ಯ ಚುನಾವಣಾ ಫಲಿತಾಂಶ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆರ್. ಅಶೋಕ್, ಬಿಜೆಪಿ ಮತ್ತೆ ಮತ್ತೆ ಜಯಬೇರಿ ಬಾರಿಸ್ತಿದೆ. 5 ರಾಜ್ಯಗಳ ಚುನಾವಣೆಯಲ್ಲಿ 4 ರಾಜ್ಯದಲ್ಲಿ ಬಿಜೆಪಿ ಜಯ ಗಳಿಸ್ತಿದೆ. ಪಂಚರಾಜ್ಯಗಳ ಪೈಕಿ ಕಾಂಗ್ರೆಸ್ಗೆ ಪಾಲಿಗೆ ಇದ್ದದ್ದು, ಪಂಜಾಬ್ ಮಾತ್ರ. ಈಗ ಪಂಜಾಬ್ನಲ್ಲೂ ಹೀನಾಯವಾಗಿ ಸೋತಿದ್ದಾರೆ. ಜನರ ದಿಕ್ಸೂಚಿ ಫಲಿತಾಂಶ ಇದು. ಮುಂದೆ ಕರ್ನಾಟಕದಲ್ಲೂ ಇದೇ ಫಲಿತಾಂಶ ಬರಲಿದೆ ಎಂದರು.
ಕಾಂಗ್ರೆಸ್ನವರು ಪಂಜಾಬ್ನಲ್ಲಿ ಅಬ್ಬರದ ಪ್ರಚಾರ ಮಾಡಿದ್ರು. ಆದರೆ ಅಲ್ಲಿನ ಮತದಾರರು ಅವರಿಗೆ ಮಣೆ ಹಾಕಲಿಲ್ಲ. ಸಾರ್ವತ್ರಿಕ ಚುನಾವಣೆ ಹತ್ತಿರ ಆಗ್ತಿದಂತೆ, ಕರ್ನಾಟಕದಲ್ಲೂ ಬಿಜೆಪಿ ಅಲೆ ಎಳಲಿದೆ. ಕಾಂಗ್ರೆಸ್ನವರು ಮೇಕೆದಾಟು ಪಾದಯಾತ್ರೆ ಮಾಡಿ ಕರೊನಾ ಸೋಂಕು ಹೆಚ್ಚಳ, ಟ್ರಾಫಿಕ್ ಜಾಮ್ ಕಿರಿಕಿರಿ ಉಂಟು ಮಾಡಿದ್ದರು. ಈ ಕುರಿತು ಜನ ಕಾಂಗ್ರೆಸ್ನವರಿಗೆ 'ಪಾದಯಾತ್ರೆ ಬೇಡ, ತೀರ್ಥ ಯಾತ್ರೆ ಮಾಡಿ' ಅಂತಿದ್ದಾರೆ ಎಂದು ವ್ಯಂಗ್ಯವಾಡಿದರು.